ವಿಜಯಸಾಕ್ಷಿ ಸುದ್ದಿ, ಗದಗ : ಇಂದಿನ ಆಧುನಿಕ ದಿನಗಳಲ್ಲಿ ಮಹಿಳೆಯರಲ್ಲಿ ಸ್ಪರ್ಧಾ ಮನೋಭಾವ, ಶಿಕ್ಷಣ ಪಾಂಡಿತ್ಯದಿಂದಾಗಿ ಎಲ್ಲ ಕ್ಷೇತ್ರದಲ್ಲೂ ಗಟ್ಟಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ರಾಜ್ಯ ಐಎಂಎ ನಿಕಟಪೂರ್ವ ಅಧ್ಯಕ್ಷ, ಗದುಗಿನ ತಜ್ಞ ವೈದ್ಯ ಡಾ.ರಾಜಶೇಖರ ಬಳ್ಳಾರಿ ಅಭಿಪ್ರಾಯಪಟ್ಟರು.
ಅವರು ಗದಗ ಐಎಂಎ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ಗದಗ ಶಾಖೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರ ಸ್ಥಾನಮಾನ ಉತ್ತಮಪಡಿಸುವಿಕೆ, ಸಾಮಾಜಿಕ ಬೆಳವಣಿಗೆಗೆ ಅಗತ್ಯತೆಯ ಸಮಾನತೆ ಕಲ್ಪಿಸುವುದು ಇಂದಿನ ಅಗತ್ಯತೆಯಾಗಿದೆ. ಕೌಟುಂಬಿಕ ಹಾಗೂ ಸಾಮಾಜಿಕ ಹಲವಾರು ಕಟ್ಟುಪಾಡುಗಳ ಮಧ್ಯದಲ್ಲಿಯೂ ಶೈಕ್ಷಣಿಕ ಅರ್ಹತೆ, ಪರಿಣಿತಿಯನ್ನು ಹೊಂದುವ ಮೂಲಕ ಮಹಿಳೆ ದಿಟ್ಟತನದ ಹೆಜ್ಜೆಯನ್ನಿಟ್ಟು ಮುನ್ನಡೆ ಸಾಧಿಸುತ್ತಿರುವದು ಶ್ಲಾಘನೀಯ ಎಂದರು.
ಕುಟುಂಬದಲ್ಲಿ ಪಾಲಕ-ಪೋಷಕರು, ಪತಿಯ ಮನೆಯಿಂದ ಸಮಾನತೆಯೊಂದಿಗೆ ಸಹಕಾರ, ಪ್ರೋತ್ಸಾಹ ದೊರೆತಾಗ, ಅವಳಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಕೊಟ್ಟಾಗ ಮಾತ್ರ ಮಹಿಳೆಯ ಸಾಧನೆಯ ಛಲದ ಬದುಕು ಸುಗಮವಾಗಲು ಸಾಧ್ಯ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ 30 ಸಾಧಕ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಸುಮಾರು 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸುಮಾರು 40 ಸಾವಿರ ರೂ. ಮೌಲ್ಯದ ಕನ್ನಡಗಳನ್ನು ಉಡುಗೊರೆಯಾಗಿ ನೀಡಲಾಯಿತು. ವೇದಿಕೆಯ ಮೇಲೆ ಗದಗ ಐಎಂಎ ಮಾಜಿ ಅಧ್ಯಕ್ಷ ಡಾ.ಪ್ಯಾರಅಲಿ ನೂರಾನಿ ಉಪಸ್ಥಿತರಿದ್ದರು.
ಡಾ. ಜಿ.ಎಸ್. ಪಲ್ಲೇದ ಸ್ವಾಗತಿಸಿದರು. ಐಎಂಎ ಕಾರ್ಯದರ್ಶಿ ಡಾ.ಚಂದ್ರಶೇಖರ ಬಳ್ಳಾರಿ ನಿರೂಪಿಸಿದರು. ಐಎಂಎ ಮಹಿಳಾ ಘಟಕದ ಕಾರ್ಯದರ್ಶಿ ಡಾ.ರಾಧಿಕಾ ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಡಾ.ಸೋನಿಯಾ ಕರೂರ ವಂದಿಸಿದರು.
ಡಾ.ಬಸವರಾಜ ಆಲೂರ, ಡಾ.ಶೇಖರ ಸಜ್ಜನರ, ಡಾ. ವ್ಹಿ.ಎಸ್. ಹೊಸಮಠ, ಡಾ. ಜಿ.ಬಿ. ಬಿಡಿನಹಾಳ, ಡಾ.ಅನುಪಮಾ ಪಾಟೀಲ, ಡಾ.ಸುನೀತಾ ಕುರಡಗಿ, ಶೈನಾಜಬೇಗಂ ಮಹ್ಮದಗೌಸ್ ನೆಗಳೂರ ಮುಂತಾದವರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘ ಗದಗ ಶಾಖೆಯ ಅಧ್ಯಕ್ಷ ಜಿ.ಎಸ್. ಪಲ್ಲೇದ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಮಾತ್ರ ಮಹಿಳೆಯರು ಮತ್ತು ಮಹಿಳೆಯರ ಸ್ಥಾನಮಾನದ ಬಗ್ಗೆ ಮಾತನಾಡುವ ಬದಲು, ನಿತ್ಯದ ಬದುಕಿನಲ್ಲಿ ಮಹಿಳಾ ಅಭಿವೃದ್ಧಿಗೆ ಪೂರಕವಾದ ಕಾರ್ಯ ನಡೆಯುವಂತಾಗಬೇಕು ಎಂದರು.
Advertisement