ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಿಳೆ ತನ್ನ ಕುಟುಂಬದ ಪ್ರಗತಿಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವ ಮೂಲಕ ಸುಭದ್ರ, ಸಮೃದ್ಧ, ಸುಸಂಸ್ಕೃತ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಅದಕ್ಕಾಗಿ ಮಹಿಳೆಗೆ ಭಾರತದಲ್ಲಿ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ ಎಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜ. ವಚನಾನಂದ ಮಹಾಸ್ವಾಮಿಗಳು ನುಡಿದರು.
ಅವರು ಪಟ್ಟಣದಲ್ಲಿ ಲಕ್ಷ್ಮೇಶ್ವರ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬಂತೆ ಮಹಿಳೆಯು ಕುಟುಂಬದ ಪ್ರಗತಿಗಷ್ಟೇ ಅಲ್ಲದೇ ಎಲ್ಲ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ, ಸೇವೆಯ ಮೂಲಕ ದೇಶದ ಪ್ರಗತಿಗೂ ಕಾರಣಳಾಗಿದ್ದಾಳೆ. ಸಮುದಾಯದಲ್ಲಿ ತಾಳ್ಮೆ ಮತ್ತು ಸಹನೆಯ ಗುಣ ಇಲ್ಲದಿರುವುದೇ ಇಂದಿನ ಅಶಾಂತಿ-ಅತೃಪ್ತಿಗಳಿಗೆ ಮೂಲ ಕಾರಣವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಧರ್ಮಪತ್ನಿ ಚನ್ನಮ್ಮ ಬೊಮ್ಮಾಯಿ ಮಾತನಾಡಿ, ಎಲ್ಲಿ ಮಹಿಳೆ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಭೂಮಿ, ನದಿ, ದೇವತೆಗಳ ಹೆಸರೇ ಹೆಣ್ಣಾಗಿರುವುದು ಹೆಣ್ಣಿನ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಮಹಿಳೆ ಸಮಾಜದ ಬಹುಮುಖ್ಯ ಅಂಗವಾಗಿದ್ದು, ಮಹಿಳೆ ಸುಶಿಕ್ಷಿತಳಾಗಬೇಕು. ಆ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಸೂಪರ್ ಸಂಸಾರ ಕಾರ್ಯಕ್ರಮವನ್ನು ಪಂಚಮಸಾಲಿ ಸಂಘದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಶ್ಯಿಮಗೌಡರ ಉದ್ಘಾಟಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಮಾಜಿ ಅಧ್ಯಕ್ಷೆ ಜಯಕ್ಕ ಅಂದಲಗಿ, ಸಂಘದ ತಾಲೂಕಾಧ್ಯಕ್ಷೆ ಶಾರದಾ ಮಹಾಂತಶೆಟ್ಟರ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಮಾಲಾದೇವಿ ದಂದರಗಿ, ಸರೋಜಾ ಚಂದ್ರು ಲಮಾಣಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಕಿತ್ತೂರು ಚನ್ನಮ್ಮ ಪ್ರಶಸ್ತಿ ಪುರಸ್ಕೃತ ಲಲಿತಾ ಕೆರಿಮನಿಯವರಿಗೆ ಸಮಾಜದ ಪರವಾಗಿ `ಸುಕೃತಿಮಾ’ ಪ್ರಶಸ್ತಿಯನ್ನ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಸಂತಾ ಹುಲ್ಲತ್ತಿ ಪ್ರದಾನ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಸುನೀತಾ ಮಂಜುನಾಥ ಮಾಗಡಿ ವಹಿಸಿದ್ದರು. ಕೃತಿಕಾ ಮಾಗಡಿ, ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಸೇರಿದಂತೆ ಅನೇಕರಿದ್ದರು.
ಮುಕ್ತಾ ಕಳಸಾಪುರ, ರತ್ನಾ ಕುಂಬಾರ, ಸ್ನೇಹಾ ಹೊಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಗಾಯಕವಾಡ, ರೇಖಾ ಘೋರ್ಪಡೆ, ಮೈತ್ರಾದೇವಿ ಹಿರೇಮಠ, ಎ.ಎಸ್. ಬೆನ್ನಾಳ, ಜಾಧವ ನಿರ್ಣಾಯಕರಾಗಿದ್ದರು.
ಸೂಪರ್ ಸಂಸಾರ ಸ್ಫರ್ಧೆಯಲ್ಲಿ ಪುಷ್ಪಾ-ಪ್ರಭು ಅಣ್ಣಿಗೇರಿ(ಪ್ರಥಮ), ಮುಕ್ತಾ-ಮಲ್ಲು ಕಳಸಾಪುರ (ದ್ವಿತೀಯ), ಸಹನಾ-ಅನಿಲ ಮುಂಜಿ (ತೃತೀಯ) ಸ್ಥಾನ ಪಡೆದರು. ರಂಗೋಲಿ ಸ್ಫರ್ಧೆಯಲ್ಲಿ ಸಹನಾ ಮುಂಜಿ (ಪ್ರಥಮ) ರಚನಾ ಮುಂಜಿ (ದ್ವಿತೀಯ) ಅನ್ನಪೂರ್ಣೇಶ್ವರಿ ಹಿರೇಮಠ (ತೃತೀಯ) ಬಹುಮಾನ ಪಡೆದರು.