ವಿಜಯಸಾಕ್ಷಿ ಸುದ್ದಿ, ರೋಣ: ಸಮಾಜದಲ್ಲಿ ಮಹಿಳೆಗೂ ದೇವತೆಯ ಸ್ಥಾನಮಾನ ಸಿಕ್ಕಿದೆ. ಮಹಿಳೆ ಅಬಲೆಯಲ್ಲ, ಸಬಲೆ ಎನ್ನುವುದನ್ನು ಸಾಧನೆಯ ಮೂಲಕ ತೋರಿಸಬೇಕಿದೆ ಎಂದು ಕದಳಿ ಹಾಗೂ ಸ್ಪಂದನಾ ಮಹಿಳಾ ವೇದಿಕೆಯ ತಾಲೂಕಾಧ್ಯಕ್ಷೆ ಶಶಿಕಲಾ ಪಾಟೀಲ ಹೇಳಿದರು.
ಅವರು ರವಿವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಿಳೆ ತಾಯಿಯಾಗಿ,ಅಕ್ಕನಾಗಿ, ತಂಗಿಯಾಗಿ, ಮಡದಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸುವ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡು ತನ್ನ ಕುಟುಂಬದ ಕೀರ್ತಿಯನ್ನು ಹೆಚ್ಚಿಸುವ ಸಲುವಾಗಿ ತನ್ನ ಜೀವನವನ್ನು ಸವೆಸುತ್ತಾಳೆ ಎಂದರು.
ಅಶ್ವಿನಿ ದೊಡ್ಡಲಿಂಗಪ್ಪನವರ ಮಾತನಾಡಿ, ಮಹಿಳೆ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವ ಜೊತೆಗೆ ಮಕ್ಕಳ ಅಕ್ಷರ ಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಅಂದಾಗ ಮಾತ್ರ ಕುಟುಂಬದ ಕೀರ್ತಿ ಬೆಳಗಲು ಸಾಧ್ಯ ಎಂದರು.
ಮಾತೋಶ್ರೀ ಬಸಮ್ಮ ತಾಯಿಯವರ ಸಾರ್ಥಕ ಬದುಕಿನ ಕುರಿತು ಡಾ. ಜಯಶ್ರೀ ಹೊಸಮನಿ ಉಪನ್ಯಾಸ ನೀಡಿದರು. ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರು ತಯಾರಿಸಿದ ತಿನಿಸುಗಳು ಸೇರಿ ವಿವಿಧ ಕಲಾಕೃತಿಗಳ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಜಾನಪದ ಗೀತೆಗಳೊಂದಿಗೆ ಬೀಸುಕಲ್ಲು ಮತ್ತು ಶಾವಿಗೆ ಹೊಸೆಯುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶ್ರಮಿಕ ರೈತ ಮಹಿಳೆಯರನ್ನು ಗುರುತಿಸಿ ಗೌರವಿಸಲಾಯಿತು.
ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಮಂಜುಳಾ ರೇವಡಿ, ನಾಜಬೇಗಂ ಯಲಿಗಾರ, ಗೀತಾ ಯಾಳಗಿ, ಅನಸಮ್ಮ ವಾಲ್ಮೀಕಿ, ಜ್ಯೋತಿ ರಡ್ಡೇರ, ರಂಜಮ್ಮ ಮುಗುಳಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.