ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕುಡಿಯುವ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪುರಸಭೆಗೆ ದೌಡಾಯಿಸಿದ ಮಹಿಳೆಯರು ಕುಡಿಯುವ ನೀರಿನ ಅವ್ಯವಸ್ಥೆ ಮತ್ತು ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.
ಪಟ್ಟಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನತೆ ರೋಸಿ ಹೋಗಿದ್ದಾರೆ. ಮಳೆಗಾಲದಲ್ಲೂ 15-20 ದಿನ ಕಳೆದರೂ ಕುಡಿಯುವ ನೀರು ಬರುತ್ತಿಲ್ಲ. ಜನತೆಗೆ ಸವಳು ನೀರೇ ಗತಿಯಾಗಿದೆ. ಸಹನೆ ಮೀರಿದ ಸಾರ್ವಜನಿಕರು ಸ್ಥಳೀಯ ಪುರಸಭೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದ ವಾರ್ಡ್ ನಂ-10, 16, 17 ಸೇರಿದಂತೆ ಇತರೇ ವಾರ್ಡಿನ ಮಹಿಳೆಯರು ಮಂಗಳವಾರ ಪುರಸಭೆಗೆ ದೌಡಾಯಿಸಿ ಮುಖ್ಯಾಧಿಕಾರಿ ಮತ್ತು ಪುರಸಭೆ ಅಧ್ಯಕ್ಷರ ವಿರುದ್ಧ ಹರಿಹಾಯ್ದರು. ಈ ವೇಳೆ ತೀವೃ ಆಕ್ಷೇಪವೆತ್ತಿದ ಮಹಿಳೆಯರು ಕಳೆದ 20 ದಿನಗಳಿಂದ ನದಿ ನೀರು ಬಂದಿಲ್ಲ. ಈ ಸಮಸ್ಯೆ ಕಳೆದ ಹಲವು ವರ್ಷಗಳಿಂದಲೂ ನಿರ್ಮಾಣವಾಗಿದ್ದು, ನೀರಿನ ಬವಣೆ ತಪ್ಪದಂತಾಗಿದೆ. 20 ದಿನಗಳಿಗೊಮ್ಮೆ ಬರುವ ನೀರು ಸಂಗ್ರಹಿಸಿ ಬಳಸಬೇಕು ಮತ್ತು ಸಾರ್ವಜನಿಕ ನಳದ ಸವಳು ನೀರು ಬಳಕೆಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೇಸಿಗೆಯಲ್ಲಿ ನದಿಯಲ್ಲಿ ನೀರಿಲ್ಲ ಎಂಬ ಕಾರಣ ನೀಡಿದರೆ ಮಳೆಗಾಲದಲ್ಲಿ ಮೋಟರ್ ಪಂಪ್ ದುರಸ್ಥಿ, ಪೈಪಲೈನ್ ಒಡೆದಿದೆ, ವಿದ್ಯುತ್ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳ ಕಾರಣ ಹೇಳಿ ಕಳುಹಿಸುತ್ತಿದ್ದೀರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ, ನಾಗೇಶ ಅಮರಾಪೂರ ಮಾತನಾಡಿ, ಜನರಿಗೆ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಪೂರೈಸುವದು ಪುರಸಭೆ ಕರ್ತವ್ಯವಾಗಿದೆ. ಪುರಸಭೆಯ ಆಡಳಿತ ಮಂಡಳಿ ಮತ್ತು ಶಾಸಕರ ನಡುವಿನ ಭಿನ್ನಾಭಿಪ್ರಾಯದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ.
ಆದಷ್ಟು ಬೇಗ ಕುಡಿಯುವ ನೀರು, ಮೂಲಭೂತ ಸೌಲಭ್ಯ ಕಲ್ಪಿಸದಿದ್ದರೆ ಸಂಘಟನೆಯಿಂದ ಹೋರಾಟ ಮಾಡಲಾಗುತ್ತದೆ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಉಪಾಧ್ಯಕ್ಷ ಫಿರ್ಧೋಸ್ ಆಡೂರ, ಸದಸ್ಯರಾದ ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ಪ್ರವೀಣ ಆಚಾರಿ, ಪ್ರಕಾಶ ಮಾದನೂರ, ಗೌರಮ್ಮ, ರತ್ನವ್ವ, ಶೇಖವ್ವ, ನಿರ್ಮಲಾ, ಗೌರಮ್ಮ ಸುಣಗಾರ, ಯಲ್ಲವ್ವ ಗೋಡಿ, ರತ್ನವ್ವ ಹಳ್ಳಿಕೇರಿ, ಮಲ್ಲವ್ವ ಗೋಡಿ ಸೇರಿದಂತೆ ಪುರಸಭೆ ವ್ಯವಸ್ಥಾಪಕಿ, ಮಂಜುಳಾ ಹೂಗಾರ, ಶಿವಾನಂದ ಅಜ್ಜಣ್ಣವರ ಸೇರಿ ವಿವಿಧ ವಾರ್ಡ್ಗಳ ಮಹಿಳೆಯರು ಇದ್ದರು.
ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಹೇಶ ಹಡಪದ, ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಸರಬರಾಜಾಗುವ ಪೈಪ್‌ಲೈನ್ ಎಲ್ಲೆಂದರಲ್ಲಿ ಸೋರುತ್ತಿದೆ. ನೀರೆತ್ತುವ ಪಂಪಸೆಟ್, ಯಂತ್ರೋಪಕರಣಗಳು ಪದೇ ಪದೇ ದುರಸ್ಥಿಗೊಳಗಾಗುತ್ತಿವೆ. ಅಮೃತ 2.0 ಯೋಜನೆಯಡಿಯ 33 ಕೋಟಿ ರೂ ಅನುದಾನದಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ನೀರು ಸರಬರಾಜು ಇಲಾಖೆಗೆ ಕಳುಹಿಸಲಾಗಿದೆ. ಪಂಪ್ ದುರಸ್ಥಿ ಕಾರ್ಯ ನಡೆದಿದ್ದು, 3/4 ದಿನಗಳಲ್ಲಿ ನೀರು ಪೂರೈಕೆಯಾಗಲಿದೆ. ಬೋರ್‌ವೆಲ್‌ಗಳ ಮೂಲಕ ಎಲ್ಲ ವಾರ್ಡುಗಳಲ್ಲಿ ಸಾರ್ವಜನಿಕ ನಲ್ಲಿ ನೀರು ನಿರಂತರ ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.