ಆರೋಗ್ಯವಾಗಿರಲು ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ತನ್ನ ಕಣ್ಣುಗಳಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಅಷ್ಟು ಮಾತ್ರವಲ್ಲ, ಇತ್ತೀಚಿನ ಅಧ್ಯಯನವು ನಿಮಗೆ ಎಷ್ಟು ನಿದ್ರೆ ಸಾಕಾಗುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ನಿಮ್ಮ ವಯಸ್ಸು ಮಾತ್ರವಲ್ಲ, ನಿಮ್ಮ ಲಿಂಗವೂ ಮುಖ್ಯವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ನಿದ್ರೆ ಬೇಕು ಎಂದು ತಜ್ಞರು ನಂಬುತ್ತಾರೆ. ಮಹಿಳೆಯರು ಹೆಚ್ಚು ನಿದ್ದೆ ಬೇಕಾಗಿರುವುದು ಯಾಕಾಗಿ ಎಂಬುದನ್ನು ತಿಳಿಯೋಣ.
ಮಹಿಳೆಯರಿಗೆ ಹೆಚ್ಚು ನಿದ್ರೆ ಅತ್ಯವಶ್ಯಕ: ಪುರುಷರಿಗಿಂತ ಮಹಿಳೆಯರಿಗೆ ಸುಮಾರು 20 ನಿಮಿಷ ಹೆಚ್ಚು ನಿದ್ರೆ ಬೇಕು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಮಹಿಳೆಯರಲ್ಲಿ ನಿದ್ರೆ ಮತ್ತು ನಿದ್ರಾಹೀನತೆಗಳ ಬಗ್ಗೆ ಕಡಿಮೆ ಮಾಹಿತಿ ಲಭ್ಯವಿದ್ದರೂ, ದೈನಂದಿನ ಚಟುವಟಿಕೆಗಳಿಂದ ಚೇತರಿಸಿಕೊಳ್ಳಲು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ನಿದ್ರೆ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಯರು ನಿದ್ರಾಹೀನತೆಯಿಂದ ಬಳಲಿದರೆ ಮಾನಸಿಕ ಮತ್ತು ಶಾರೀರಿಕವಾಗಿ ಕುಗ್ಗುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಮಹಿಳೆಯರಿಗೆ ನಿದ್ರೆ ಕಡಿಮೆಯಾದರೆ ಹಾರ್ಮೋನುಗಳ ಬದಲಾವಣೆಗಳು ಕಂಡು ಬರುತ್ತದೆ.
ಋತುಚಕ್ರದಲ್ಲಿನ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಂತಹ ಹಾರ್ಮೋನುಗಳಲ್ಲಿ ಏರಿಳಿತ ಕಂಡು ಬರುತ್ತದೆ. ಇದರಿಂದ ಮಹಿಳೆಯರ ದೇಹ ಅನಾರೋಗ್ಯಕ್ಕೆ ಬೇಗನೆ ತುತ್ತಾಗುತ್ತದೆ. ಬಿಜಿಎಸ್ ಆಸ್ಪತ್ರೆ ಸೈಕಾಲಾಜಿಸ್ಟ್ ಸುಮಲತಾ ವಾಸುದೇವ್ ಅವರು “ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಹೆಚ್ಚಾಗಿ ಹಲವು ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಸಾಮಾನ್ಯವಾಗಿ, ಮಹಿಳೆಯರು ತಮ್ಮ ಆರೋಗ್ಯಕ್ಕಿಂತ ಹೆಚ್ಚಾಗಿ ತಮ್ಮ ಜವಾಬ್ದಾರಿಗಳಿಗೆ ಆದ್ಯತೆ ನೀಡುತ್ತಾರೆ. ಇದು ಅವರನ್ನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿಸುತ್ತದೆ” ಎಂದು ಹೇಳಿದ್ದಾರೆ.