ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ತನ್ನ ಸಾಧನೆಯನ್ನು ತೋರುತ್ತಿದ್ದಾಳೆ. ಅಂತೆಯೇ ಬಹಳಷ್ಟು ರೀತಿಯಲ್ಲಿ ಆರೋಗ್ಯದ ಸಮಸ್ಯೆಯನ್ನು ಸಹ ಎದುರಿಸುತ್ತಿದ್ದಾಳೆ. ಮಹಿಳೆ ಇಂದು ಹಿಂದಿಗಿಂತಲೂ ಹೆಚ್ಚಾಗಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಇಂದಿನ ಆಧುನಿಕ ಜೀವನ ಶೈಲಿ ಆಹಾರ ಪದ್ಧತಿ ಬಹಳಷ್ಟು ಬದಲಾವಣೆ ಆಗಿರುವುದರಿಂದ ಇಂದು ಅದೆಷ್ಟೋ ಆರೋಗ್ಯದ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಜೀವನದ ಏರಿಳಿತಗಳಲ್ಲಿ ಸಮ ಚಿತ್ತವನ್ನು ಕಾಯ್ದುಕೊಳ್ಳುವ ಸ್ವಭಾವವನ್ನು ಇಂದಿನ ಮಹಿಳೆ ರೂಡಿಸಿಕೊಳ್ಳಬೇಕು ಎಂದು ಸ್ತ್ರೀರೋಗ ತಜ್ಞರಾದ ಡಾ. ಸ್ನೇಹಾ ಶಿರೋಳ ಕಿವಿಮಾತು ಹೇಳಿದರು.
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವಿವಿಧೋದ್ದೇಶ ಮಹಿಳಾ ಟ್ರಸ್ಟ್ ಗದಗ ವತಿಯಿಂದ ಗದುಗಿನ ತೋಟಗಾರಿಕಾ ಇಲಾಖೆಯ ಆವರಣದಲ್ಲಿರುವ ಶಿವ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಶಾರದಾ ಕವಲೂರ ಮಾತನಾಡುತ್ತಾ, ಕಾನೂನಿನ ಅಡಿಯಲ್ಲಿ ಇಂದು ಮಹಿಳೆಗೆ ಎಲ್ಲ ರೀತಿಯ ಭದ್ರತೆ, ರಕ್ಷಣೆ ಇದ್ದಾಗಲೂ ಸಹ ಸಂಪೂರ್ಣ ನ್ಯಾಯ ಸಿಗುತ್ತಿಲ್ಲ. ಹಾಗಾಗಿ ಮಹಿಳೆ ತನ್ನನ್ನು ತಾನು ಅರಿತುಕೊಳ್ಳುತ್ತಾ ನ್ಯಾಯಯುತವಾದ ನೈತಿಕ ಬದುಕನ್ನು ನಡೆಸುವ ಹೊಣೆಗಾರಿಕೆ ಹೊರಬೇಕು. ಜೊತೆಗೆ ಸಂವಿಧಾನಾತ್ಮಕ ಕಾನೂನಿನ ತಿಳುವಳಿಕೆ ಹೊಂದಿ ಸಮಾಜದ ಸರ್ವ ರಂಗಗಳಲ್ಲಿ ತನ್ನ ಅಭಿವೃದ್ಧಿಯನ್ನು ಕಾಣಬೇಕು ಎಂದರು.
ಬಸವರಾಜ ಶರಣರು ಮಾತನಾಡುತ್ತಾ, ಅನಾದಿ ಕಾಲದಿಂದಲೂ ಮಹಿಳೆಯನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಸಾಮಾಜಿಕ ಹಿನ್ನೆಲೆಯಲ್ಲಿ ಮಹಿಳೆಗೆ ಎಲ್ಲಿಯೂ ಸಹ ತೊಂದರೆಯಾಗದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು ಎಂದರು.
ಸಮಾಜದ ಹಿರಿಯರಾದ ಲೀಲಾ ಮುದರಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟಿನ ಕಾರ್ಯದರ್ಶಿಗಳಾದ ಭಾಗ್ಯಶ್ರೀ ಶಿರೋಳ ಉಪಸ್ಥಿತರಿದ್ದರು. ರಾಜೇಶ್ವರಿ ಶಿರೋಳ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕರಾದ ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ಮಧು ಪಾಟೀಲ್ ಹಾಗೂ ಶೈಲಜಾ ಕವಲೂರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಕವಿತಾ ಕೊಣ್ಣೂರ ಹಾಗೂ ಶೀಲಾ ಮುದರಡ್ಡಿ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಅಕ್ಕಮ್ಮ ರಡ್ಡೆರ, ಪವಿತ್ರಾ ರಡ್ಡಿ, ಶೋಭಾ ಪಾಟೀಲ್, ಓದುಗೌಡರ, ಹಾಗೂ ಸಮಸ್ತ ರಡ್ಡಿ ಬಳಗದ ಮಹಿಳೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಪ್ರೇಮಾ ಮೇಟಿ ಮಾತನಾಡುತ್ತಾ, ಮಹಿಳೆ ಎನ್ನುವ ಶಕ್ತಿ ಮನೆಯನ್ನು, ಸಮಾಜವನ್ನು ಬೆಳಗುವ ಬೆಳಕಾಗಬೇಕು. ಶಿವಶರಣರ ಆದರ್ಶಗಳು ನಮ್ಮ ಜೀವನಕ್ಕೆ ಬುನಾದಿಯಾಗಬೇಕು. ತಾಯಿ ನೀಡುವ ಮೌಲ್ಯಗಳನ್ನು ಮರೆಯದೆ ಜೀವನದಲ್ಲಿ ಅನ್ವಯಿಸಿಕೊಳ್ಳುವ ಪ್ರವೃತ್ತಿ ಮಹಿಳಾ ಸಂಕುಲದ್ದಾಗಬೇಕು. ಹೆಣ್ಣು ಸಮಾಜದ ಕಣ್ಣಾಗಿ ಬದುಕನ್ನು ನಿರ್ವಹಿಸುವ ಕಲೆಯನ್ನು ರೂಡಿಸಿಕೊಳ್ಳಬೇಕು ಎಂದರು.