ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಬಸವಣ್ಣನವರು ಸೇರಿದಂತೆ ಅನೇಕ ಶರಣರು, ಮಹಿಳೆಯರಿಗೂ ಸಮಾನತೆಯನ್ನು ಪ್ರತಿಪಾದಿಸಿದರು. ಈಗಲೂ ಡಾ.ಅಂಬೇಡ್ಕರ್ ಅವರ ಆಶಯದಂತೆ ಲಿಂಗ ತಾರತಮ್ಯ ತೋರದ, ಮಹಿಳೆಯರ ಪರ ಅನೇಕ ಕಾನೂನುಗಳಿದ್ದರೂ ಸಂಪೂರ್ಣ ಅನುಷ್ಠಾನಗೊಳ್ಳಲು ಮೀನ-ಮೇಷ ಎಣಿಸುವಂತಾಗಿದೆ ಎಂದು ಮುಂಡರಗಿ ತಾಲೂಕಿನ ಮೇವುಂಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಜ್ಯೋತಿ ಗಣಪ್ಪನವರ ಹೇಳಿದರು.
ಗದಗ ತಾಲೂಕಾ ಕಸಾಪ ಆಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ `ಸ್ತ್ರೀ ಸಾಧನೆಯ ಸಿರಿ’ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಶಿಕ್ಷಣದ ಕುರಿತು ಉಪನ್ಯಾಸ ನೀಡಿದರು.
ರಾಜಕೀಯ, ಸಮಾಜಿಕ ಅಂತರ ಕಡಿಮೆಯಾಗಿ ಮಹಿಳೆಯರ ಘನತೆ ಎತ್ತಿ ಹಿಡಿಯುವ ಕೆಲಸ ನಿರಂತರವಾಗಿರಬೇಕು. ಸಂವಿಧಾನದ ಆಶಯದಂತೆ ಮಹಿಳೆ ಕೂಡಾ ಸಮಾಜದ ಮುಖ್ಯ ಭಾಗವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಅದರಲ್ಲಿಯೂ ಉದ್ಯೋಗ ಮಾಡುವ ಸ್ಥಳದಲ್ಲಿ ಮಹಿಳೆಗೆ ತನ್ನದೇ ಆದ ಗೌರವ, ಘನತೆ ಕೊಡುವಂತಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶೋಭಾ ಆಡಿನ ಮಾತನಾಡಿ, ಮಹಿಳೆಯರು ಕೂಡಾ ಹೊಸ ವಿಚಾರಗಳೊಂದಿಗೆ ಜೀವನ ನಡೆಸುವದರ ಜತೆಗೆ ಸ್ವಾವಲಂಬಿ ಬದುಕಿಗೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸವಿತಾ ಅಂಗಡಿ, ಶೋಭಾ ಯಕ್ಕೇಲಿ ತಮ್ಮ ಅನುಭವ ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕಾ ಕಸಾಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧಿಸುತ್ತಿದ್ದಾರೆ. ಆದರೂ ಅವರು ತಮ್ಮ ಕುಟುಂಬ, ಸಮಾಜ ಮತ್ತು ನೆರೆಹೊರೆಯವರೊಂದಿಗೆ ಇರುವ ಬಾಂಧವ್ಯ ಅರಿತುಕೊಂಡು ಅದರಂತೆ ನಡೆಯಬೇಕು ಎಂದರು.
ಬಸವರಾಜ ಗಣಪ್ಪನವರ ರಚನೆಯ `ಕರಿಬೇವಿನ ಸಸಿ’ ಕತೆಯನ್ನು ಶಿಕ್ಷಕಿ ಬಸಮ್ಮ ಹೊಂಬಳ ಸಾದರಪಡಿಸಿದರು. ಮಂಜುಳಾ ವೆಂಕಟೇಶಯ್ಯ ಮತ್ತು ನೀಲಮ್ಮ ಅಂಗಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿದವು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕತೆಗಾರ ಬಸವರಾಜ ಗಣಪ್ಪನವರ ಪ್ರೊ. ಕೆ.ಎಚ್. ಬೇಲೂರ, ಶಾಂತಾ ಗಣಪ್ಪನವರ, ಭಾರತಿ ಕೋಟಿ, ಪುಷ್ಪಾ ಭಂಡಾರಿ, ಕಿಶೋರಬಾಬು ನಾಗರಕಟ್ಟಿ, ಸಿ.ಕೆ. ಗಣಪ್ಪನವರ, ಚನ್ನಪ್ಪಗೌಡರ ಇತರರು ಪಾಲ್ಗೊಂಡಿದ್ದರು.
ಗದಗ ಕಸಾಪ ಪದಾಧಿಕಾರಿಗಳಿಂದ ವಿಶ್ವನಾಥ ಬೇಂದ್ರೆ ಅವರ ನಿರ್ದೇಶನದ `ಕನ್ಯಾ ಬೇಕು ಕನ್ಯಾ’ ಎಂಬ ನಾಟಕ ಪ್ರದರ್ಶನಗೊಂಡಿತು. ಜ್ಯೋತಿ ಹೇರಲಗಿ, ಸ್ವಾಗತಿಸಿದರು, ಪ್ರೊ. ಡಿ.ಎಸ್. ನಾಯಕ ನಿರೂಪಿಸಿದರು. ಪಾರ್ವತಿ ಬೇವಿನಮರದ ವಂದಿಸಿದರು.
ಕೇವಲ ಮಾತುಗಳಲ್ಲಿ ಸ್ತ್ರೀ ಸಮಾನತೆ ಗೌರವ ಎಂದರಷ್ಟೇ ಸಾಲದು. ಜೀವನದ ಪ್ರತಿ ಹಂತದಲ್ಲಿಯೂ ಮಹಿಳೆಯರಿಗೆ ಗೌರವ ಸಿಗಬೇಕು. ಮಹಿಳೆಗೆ ಸಿಗುವ ಎಲ್ಲ ಹಕ್ಕುಗಳು ಅನುಷ್ಠಾನಗೊಳ್ಳಬೇಕು. ಕೇವಲ ಮಹಿಳೆಯರಿಗೆ ಮೀಸಲಾಗಿ ಕೊಡುವದಲ್ಲ, ಮದ್ಯರಾತ್ರಿ ನಿರ್ಭಯದಿಂದ ಮಹಿಳೆ ಒಬ್ಬಂಟಿಯಾಗಿ ಯಾವದೇ ಅಪಾಯವಿಲ್ಲದೆ ಓಡಾಡಿಕೊಂಡರೆ ಮಾತ್ರ ಅವಳಿಗೆ ಸಿಗುವ ನಿಜವಾದ ಮೀಸಲಾತಿ ಎಂದು ಜ್ಯೋತಿ ಗಣಪ್ಪನವರ ಹೇಳಿದರು.