ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ವಾರ್ಡ್ ನಂ. 6ರ ಗಾರ್ಗಿಪೇಟೆಯಲ್ಲಿಯ ಈಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ದೈಹಿಕ ಅಂಗವಿಕಲರಿಗೆ ವೀಲ್‌ಚೇರ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನುದ್ದೇಶಿಸಿ ಮಾತನಾಡಿದ ನಗರಸಭಾ ಮಾಜಿ ಸದಸ್ಯ ಮಂಜುನಾಥ ಎಚ್. ಮುಳಗುಂದ, ಬಡತನ ನಿರ್ಮೂಲನೆಗೆ, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮತ್ತು ಆರ್ಥಿಕವಾಗಿ ಮುಂದೆ ಬರಲು ಸ್ವಯಂ ಉದ್ಯೋಗ ಕೈಗೊಳ್ಳಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಹಿಳೆಯರು ಮುಂದೆ ಬಂದರೆ ದೇಶ ಪ್ರಗತಿಯತ್ತ ಸಾಗುವುದು ಎಂದರು.
ನಾಮನಿರ್ದೇಶಿತ ಸದಸ್ಯ ಬಾಬು ನರಸಾಪೂರ ಮಾತನಾಡಿ, ಸಮಾಜಮುಖಿ ಕೆಲಸ ಮಾಡಲು ಅಧಿಕಾರವೇ ಬೇಕೆಂದಿಲ್ಲ. ಇಚ್ಛಾಶಕ್ತಿ ಇರಬೇಕು ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಮುಖಂಡರಾದ ರಾಮಣ್ಣ ರಾಂಪೂರ ಮಾತನಾಡಿದರು.
ಈ ಸಂದರ್ಭದಲ್ಲಿ ಶಂಕರಪ್ಪ ಮಾಳಶೆಟ್ಟಿ, ಈರಣ್ಣ ಕೊಡಗಂಟಿ, ಮುತ್ತು ರೊಟ್ಟಿ, ನಂದೀಶ ಅಣ್ಣಿಗೇರಿ, ಚಿನ್ನಪ್ಪ ಕೊಡಗಂಟಿ, ಶಂಭಣ್ಣ ಹಳ್ಳಿ, ನಂದೇಶಪ್ಪ ಮಾಳೆಕೊಪ್ಪ, ಈರಣ್ಣ ಗಾರ್ಗಿ, ಮಲ್ಲೇಶಪ್ಪ ಮಾಳೆಕೊಪ್ಪ ಮುಂತಾದವರು ಉಪಸ್ಥಿತರಿದ್ದರು.