ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಮಹಿಳೆಯರು ಹಾಗೂ ಮಕ್ಕಳು ಸಂಪ್ರದಾಯಬದ್ಧ ‘ಗುರ್ಜಿ ಪೂಜೆ’ ನಡೆಸುವ ಮೂಲಕ ವರುಣ ದೇವನ ಕೃಪೆಗೆ ಮೊರೆ ಹೋದ ಅಪರೂಪದ ದೃಶ್ಯ ಶುಕ್ರವಾರ ಕಂಡು ಬಂತು.
ಮೇ 25ರಂದು ಸುರಿದ ಅಲ್ಪಸ್ವಲ್ಪ ರೋಹಿಣಿ ಮಳೆ ರೈತರಲ್ಲಿ ಉತ್ತಮ ಮಳೆಯ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಬಳಿಕ ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗುವ ಭೀತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಗುರ್ಜಿ ಪೂಜೆಯ ಆಚರಣೆಗೆ ಮಹಿಳೆಯರು ಮುಂದಾಗಿದ್ದಾರೆ.
ಹಿಂದಿನ ಕಾಲದಲ್ಲಿ ಮಳೆ ಕೊರತೆ ಉಂಟಾದಾಗ ಗ್ರಾಮೀಣ ಪ್ರದೇಶದ ಜನರು ಗುರ್ಜಿ ಪೂಜೆ ನೆರವೇರಿಸಿ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಆಚರಣೆಯಿಂದ ಮಳೆ ಸುರಿದು ರೈತರ ಬದುಕಿಗೆ ಆಸರೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದೆ.
ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಚರಣೆಯಲ್ಲಿ ವ್ಯಕ್ತಿ ಅಥವಾ ಬಾಲಕನ ತಲೆಯ ಮೇಲೆ ಹಂಚಿನ ತವೆ ಇಟ್ಟು ಅದರ ಮೇಲೆ ಆಕಳ ಸಗಣಿಯಿಂದ ಗುರ್ಜಿ ನಿರ್ಮಿಸಲಾಗುತ್ತದೆ. ಗುರ್ಜಿ ಹೊತ್ತ ವ್ಯಕ್ತಿಯ ಹಿಂದೆ ಮಹಿಳೆಯರು ಮತ್ತು ಮಕ್ಕಳು ಗುರ್ಜಿ ಹಾಡುಗಳನ್ನು ಹಾಡುತ್ತಾ ಗ್ರಾಮದ ಮನೆ ಮನೆಗೆ ತೆರಳುತ್ತಾರೆ.
ಪ್ರತಿ ಮನೆಯವರು ಗುರ್ಜಿಗೆ ಪೂಜೆ ಸಲ್ಲಿಸಿ ನೀರು ಸುರಿದು, “ಓ ಮಳೆರಾಯ, ಎಲ್ಲಿದ್ದರೂ ಬಾ” ಎಂದು ಪ್ರಾರ್ಥನೆ ಸಲ್ಲಿಸುವ ಮೂಲಕ ಉತ್ತಮ ಮಳೆಯಿಗಾಗಿ ದೇವರಲ್ಲಿ ಬೇಡಿಕೊಳ್ಳುತ್ತಾರೆ.
ಪ್ರದೇಶದಲ್ಲಿ ಹೆಸರು, ಉದ್ದು, ಅಲಸಂದಿ, ಮಡಿಕೆ ಹಾಗೂ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೊರತೆಯಿಂದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು, ಇನ್ನೆರಡು-ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ರೈತರು ಭಾರೀ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.
ಮಳೆ ಮುಂದುವರಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಅನೇಕ ರೈತರು ಸಾಲ-ಸೂಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಹಣ ಖರ್ಚು ಮಾಡಿದ್ದಾರೆ. ಆದರೆ ಮಳೆ ಕೈಕೊಟ್ಟ ಪರಿಣಾಮ ರೈತರು ತಲೆ ಮೇಲೆ ಕೈಹೊತ್ತು ಆಕಾಶದತ್ತ ನೋಡುವಂತಾಗಿದೆ.
‘ಓ ಮಳೆರಾಯ, ಎಲ್ಲಿದ್ದರೂ ಬಾ…!’
“ರೋಹಿಣಿ ಮಳೆ ರೈತರಲ್ಲಿ ಭರವಸೆ ಮೂಡಿಸಿತ್ತು. ಆದರೆ ನಂತರ ಮಳೆ ಕೈಕೊಟ್ಟಿದೆ. ಬೆಳೆಗಳು ಉಳಿಯಲೆಂದು ಸಂಪ್ರದಾಯದಂತೆ ಗುರ್ಜಿ ಪೂಜೆ ಮೂಲಕ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.”



