ವಿಜಯಸಾಕ್ಷಿ ಸುದ್ದಿ, ಗದಗ : ಸ್ತನ್ಯಪಾನದಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಮಗುವಿಗೆ ಎದೆಹಾಲು ಉಣಿಸುವುದರಿಂದ ಸಾಕಷ್ಟು ರೋಗಗಳನ್ನು ತಪ್ಪಿಸಬಹುದು. ಜೊತೆಗೆ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಸದೃಢತೆಯನ್ನೂ ಕಾಣಬಹುದಾಗಿದೆ ಎಂದು ಗದುಗಿನ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ. ಶಶಿಧರ ರೇಶ್ಮೆ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ಡಾ.ಉದಯ ಕುಲಕರ್ಣಿ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಗದಗ ಐಎಂಎದಿಂದ ಏರ್ಪಡಿಸಿದ್ದ `ವಿಶ್ವ ಸ್ತನ್ಯಪಾನ ಸಪ್ತಾಹ’ದ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಹೆರಿಗೆಯಾದ ಒಂದು ಗಂಟೆಯೊಳಗಿನ ಅವಧಿಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸುವರ್ಣ ಘಳಿಗೆ ಎಂದು ಬಣ್ಣಿಸಲಾಗುತ್ತಿದೆ. ತಾಯಿಯ ಹಾಲು ಅಮೃತಕ್ಕೆ ಸಮಾನ, ಎದೆ ಹಾಲು ಕುಡಿದ ಮಗು ಯಾವುದೇ ತೊಂದರೆ ಇಲ್ಲದೆ ಸರ್ವಾಂಗೀಣ ಅಭಿವೃದ್ಧಿ ಹೊಂದಿಬಲ್ಲದು. ಆದ್ದರಿಂದ ಮಗು ಜನಿಸಿದ ತಕ್ಷಣ ತಾಯಿಯ ಹಾಲು ಉಣಿಸಬೇಕು. ಇದು ಉತ್ತಮ ರೋಗ ನಿರೋಧಕವಾಗಿದ್ದು, ಮಗುವಿನ ಬೆಳವಣಿಗೆಗೆ ಹೆಚ್ಚು ಶಕ್ತಿದಾಯಕ ಮತ್ತು ಹೆಚ್ಚು ಪರಿಣಾಮಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಉದಯ ಕುಲಕರ್ಣಿ ಮಾತನಾಡಿ, ತಾಯಿ-ಮಗುವಿನ ಬಾಂಧವ್ಯವನ್ನು ಹಾಗೂ ಸ್ತನ್ಯಪಾನದ ಮಹತ್ವವನ್ನು ತಿಳಿಸಿದರು. ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ. ರಾಧಿಕಾ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಸ್ತನ್ಯಪಾನದ ಬಗ್ಗೆ ತಜ್ಞ ವೈದ್ಯರನ್ನು ಆಮಂತ್ರಿಸಿ ಮಹಿಳೆಯರಿಗೆ ತಿಳುವಳಿಕೆ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತ ಬರಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ತಾಯಂದಿರು ಮೂಢನಂಬಿಕೆ, ಅಂಧಶೃದ್ಧೆಗಳಿಗೆ ಬಲಿಯಾಗಬಾರದು. ಇಂದಿನ ಆಧುನಿಕ ದಿನಗಳಲ್ಲಿ ಕೆಲ ಮಹಿಳೆಯರು ಮಗುವಿಗೆ ಹಾಲುಣಿಸಿದರೆ ತಮ್ಮ ಸೌಂದರ್ಯ ಕುಂದುವದು ಎಂಬ ಭಾವನೆ ಹೊಂದಿದ್ದಾರೆ. ಇದನ್ನು ವೈದ್ಯಕೀಯ ರಂಗ ಒಪ್ಪುವುದಿಲ್ಲ. ಮಗುವಿಗೆ ಹಾಲುಣಿಸಿದರೆ ಸಹಜವಾಗಿಯೇ ಮಹಿಳೆಯರ ಸೌಂದರ್ಯ ಇನ್ನಷ್ಟು ವೃದ್ಧಿಸುತ್ತದೆ. ಮೊದಲ ಬಾರಿಗೆ ತಾಯಿತಾದವರು ಮಗುವಿಗೆ ಹಾಲುಣಿಸುವ ಸರಿಯಾದ ಪದ್ಧತಿ, ಕ್ರಮ ತಿಳಿಯದ ಕಾರಣದಿಂದಾಗಿ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಏರುಪೇರುಗಳಾಗುವ ಸಾಧ್ಯತೆಗಳಿವೆ. ಕಾರಣ, ತಜ್ಞ ವೈದ್ಯರ ಸಲಹೆ ಪಡೆಯಬೇಕೆಂದು ಡಾ. ಶಶಿಧರ ರೇಶ್ಮೆ ತಿಳಿಸಿದರು.
Advertisement