ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಆಧುನಿಕ ಸಮಾಜದಲ್ಲಿ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅಗತ್ಯ ಮಾಹಿತಿ ಹಾಗೂ ಆರ್ಥಿಕ ನೆರವನ್ನು ಪಡೆದು ಜವಾಬ್ದಾರಿಯುತ ಯಶಸ್ವಿ ಮಹಿಳೆಯಾಗಿ ಗುರುತಿಸಿಕೊಳ್ಳಬೇಕು. ಹಣಕಾಸು ಸಾಕ್ಷರತೆಯಿಂದ ಮಾತ್ರ ಮಹಿಳೆಯರ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಲಕ್ಷ್ಮಣ ಎಂ.ಆರಿ ಹೇಳಿದರು.
ಬೆಟಗೇರಿ ಹಳೆ ಬನಶಂಕರಿದೇವಿ ಸಮುದಾಯ ಭವನದಲ್ಲಿ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಗದಗ ಶಾಖೆಯಿಂದ ಮಹಿಳೆಯರಿಗಾಗಿ ಏರ್ಪಡಿಸಿದ್ದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಮೈಕ್ರೊ ಫೈನಾನ್ಸ್ ಗಳು ನೀಡುವ ಸಾಲವನ್ನು ಅಗತ್ಯವಿದ್ದಷ್ಟೇ ಪಡೆದು ನಿಗದಿತ ಕಾರ್ಯಕ್ಕೆ ಬಳಸಿ, ಲಾಭದಾಯಕ ಉದ್ಯೋಗ ಮಾಡಿ. ಅದರಿಂದ ಬರುವ ಆದಾಯದಿಂದ ತಾವು ಪಡೆದ ಸಾಲವನ್ನು ಜವಾಬ್ದಾರಿಯಿಂದ ಮರಳಿ ಪಾವತಿಸಿ ಸಮಾಜದಲ್ಲಿ ಸದೃಢವಾಗಿ ಬೆಳೆಯಬೇಕು. ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್, ಮೈಕ್ರೋ ಫೈನಾನ್ಸ್ ಹಾಗೂ ಇತರೆಡೆಗಳಲ್ಲಿ ತಾವು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಬೇಕು. ಆ ಮೂಲಕ ಸಮಾಜದಲ್ಲಿ ಜವಾಬ್ದಾರಿಯುತ, ಸದೃಢ ಮಹಿಳೆಯರಾಗಬೇಕು ಎಂದು ಅವರು ಹೇಳಿದರು.
ಜವಾಬ್ದಾರಿಯುತ ಸಾಲ, ಕ್ರೆಡಿಟ್ ಶಿಸ್ತು ಹಾಗೂ ಹಣಕಾಸು ಸಾಕ್ಷರತೆಯ ಕುರಿತು ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಬೆಳಗಾವಿ ವಿಭಾಗೀಯ ವ್ಯವಸ್ಥಾಪಕ ರವಿ ಎಸ್.ಎನ್ ಮಾತನಾಡಿ, ರಾಜ್ಯದಲ್ಲಿ 12 ಲಕ್ಷ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುವ ಜೊತೆಗೆ ಆ ಕುಟುಂಬದ ಮಹಿಳೆಯರಲ್ಲಿ ಸ್ವಾಭಿಮಾನದ ಬದುಕು ರೂಪಿಸಿಕೊಟ್ಟು, ಅವರನ್ನು ಆರ್ಥಿಕವಾಗಿ ಬಲಗೊಳಿಸುವಲ್ಲಿ ತಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ ಎಂದರು.
ಹಣಕಾಸು ಸಾಕ್ಷರತೆ ಕುರಿತು ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಹಾವೇರಿ ಪ್ರಾದೇಶಿಕ ವ್ಯವಸ್ಥಾಪಕರಾದ ನಾಗಪ್ಪ ಸಿ ಮಾತನಾಡಿದರು. ಗದಗ ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಕುಮಾರ ಹರ್ಲಾಪೂರ ಮಾತನಾಡಿ, ಡಿಜಿಟಲ್ ವಂಚನೆಗಳ ತಡೆಗಟ್ಟುವಿಕೆ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.
ಆರ್ಥಿಕ ನೆರವನ್ನು ಪಡೆದು ಸ್ವ ಉದ್ಯೋಗಿಗಳಾಗಿ ಜೀವನ ನಿರ್ವಹಿಸುತ್ತಿರುವ ಮಹಿಳೆಯರಾದ ನಿರ್ಮಲಾ ಕಮಲಾಕ್ಷಿ, ಭಾಗ್ಯವತಿ, ಶಶಿಕಲಾ ಚಕ್ರಸಾಲಿ ಅವರು ತಾವು ಸಾಲ ಸದ್ಬಳಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಅನುಭವವನ್ನು ಹಂಚಿಕೊಂಡರು.
ಎಎಸ್‌ಐ ಬಿ.ಬಿ. ಜಕ್ಕಣ್ಣವರ, ಬೆಳಗಾವಿ ಡಿವಿಜಿನಲ್ ವ್ಯವಸ್ಥಾಪಕ ಮಾದೇಗೌಡ, ಹುಬ್ಬಳ್ಳಿ ಶಾಖೆ ವ್ಯವಸ್ಥಾಪಕ ಆನಂದ ಲಮಾಣಿ, ಏರಿಯಾ ಮ್ಯಾನೇಜರ್ ಚಂದ್ರಪ್ಪ ಅರ್ಕಸಾಲಿ ವೇದಿಕೆಯಲ್ಲಿದ್ದರು. ನೇತ್ರಾವತಿ ಪ್ರಾರ್ಥಿಸಿದರು. ಈರಣ್ಣ ಎಂ.ಎಚ್ ಸ್ವಾಗತಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಗದಗ ಶಾಖೆ ವ್ಯವಸ್ಥಾಪಕ ಬಸಪ್ಪ ಸ್ವಾದಿ ವಂದಿಸಿದರು.
ಮಕ್ಕಳಿಗೆ ಮೊಬೈಲ್ ಗೀಳನ್ನು ಬಿಡಿಸಿ ಪುಸ್ತಕ ಓದುವುದನ್ನು ರೂಢಿ ಮಾಡಿಸಬೇಕು. ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಬೇಕು. ಮಹಿಳೆಯರು ಬಸ್ ಹತ್ತುವಾಗ ಹುಷಾರಾಗಿರಬೇಕು. 18 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಬೈಕ್‌ಗಳನ್ನು ಕೊಡಬೇಡಿ. ಗುಣಮಟ್ಟದ ಶಿಕ್ಷಣ ನೀಡಿ, ಮಕ್ಕಳಲ್ಲಿ ಪ್ರಾಮಾಣಿಕತೆ, ಸ್ವಾಭಿಮಾನ, ಶ್ರಮ ಸಂಸ್ಕೃತಿಯನ್ನು ತುಂಬಿ ಇಂದಿನ ಆಧುನಿಕ ಜಗತ್ತಿನಲ್ಲಿ ಸದೃಢವಾಗಿ ಬಾಳುವಂತೆ ಸಿದ್ಧಗೊಳಿಸಬೇಕು ಎಂದು ಪಿಎಸ್‌ಐ ಲಕ್ಷ್ಮಣ ಎಂ.ಆರಿ ಕರೆ ನೀಡಿದರು.