ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸ್ವಾವಲಂಬನೆಯ ಜೀವನ ಇಂದು ಅಗತ್ಯವಿದೆ ಎಂದು ದಿವ್ಯಾ ಚಿಕ್ಕಮಠ ಹೇಳಿದರು.
ಅವರು ಪಟ್ಟಣದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಹ್ಯಾದ್ರಿ ಗ್ರಾಮೀಣಾಭಿವೃದ್ಧಿ ನಗರಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಒಂದು ತಿಂಗಳ ಉಚಿತ ಬ್ಯೂಟಿ ಪಾರ್ಲರ್ ಮತ್ತು ಮೇಕಪ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಮಹಿಳೆ ಎಲ್ಲಾ ರಂಗದಲ್ಲೂ ಮುಂದೆ ಸಾಗುತ್ತಿದ್ದು, ಇಂದು ಕುಟುಂಬ ಆರ್ಥಿಕವಾಗಿ ಸದೃಢತೆ ಹೊಂದಲು ಮಹಿಳೆಯ ಪಾತ್ರ ಬಹಳ ಮುಖ್ಯವಾಗಿದೆ. ಉತ್ತಮ ಆರೋಗ್ಯ ಹೊಂದಲು ದೈಹಿಕ ಶ್ರಮದ ಅಗತ್ಯವಿದೆ. ನಿತ್ಯ ಪೌಷ್ಠಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಿ, ಕುಟುಂಬದ ಆರೋಗ್ಯ ಕಾಪಾಡಲು ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಎಸ್.ಸಿ. ಬಡ್ನಿ ವಹಿಸಿದ್ದರು. ಶಿಲ್ಪಾ ಬದ್ರಕಾಳಿಮಠ, ಅಶೋಕ ಸೋನಗೋಜಿ, ಪುನಿತ ಓಲೆಕಾರ, ಪ್ರಕಾಶ ಮದ್ದಿನ, ದಶರಥ ಕೋಟೆಗೌಡ್ರ, ಅಕ್ಕಮ್ಮಾ ನೀಲಗುಂದ, ಸುಜಾತಾ ಚವ್ಹಾಣ, ಶೋಭಾ ಕದಡಿ, ನಾಗವೇಣಿ ನಾಯರ್ ಇದ್ದರು.