ರೈಲು ಹಳಿಗಳ ಮರದ ತುಂಡು: ರೈಲು ಹಳಿ ತಪ್ಪಿಸಲು ಕಿಡಿಗೇಡಿಗಳ ಯತ್ನ! ತಪ್ಪಿದ ಅನಾಹುತ

0
Spread the love

ನವದೆಹಲಿ: ದೇಶದಲ್ಲಿ ದಿನೇ ದಿನೇ ರೈಲು ಹಳಿ ತಪ್ಪಿಸುವ ಹುನ್ನಾರಗಳು ಹೆಚ್ಚಾಗುತ್ತಿವೆ. ವಂದೇ ಭಾರತ್ ರೈಲಿಗೆ ಕಲ್ಲು ಹೊಡೆಯುವುದರಿಂದ ಹಿಡಿದು ಆರಂಭವಾದ ಈ ಹುಚ್ಚಾಟಗಳು ಈಗ ಬೇರೆಯದ್ದೇ ಹಂತಕ್ಕೆ ಹೋಗಿವೆ. ಈಗ ಮತ್ತೆ ಅಂತಹುದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ರೈಲು ಹಳಿಗಳ ಮೇಲೆ 6 ಕೆಜಿ ತೂಕದ ಮರದ ತುಂಡುಗಳನ್ನು ಇರಿಸಿ ರೈಲು ಹಳಿ ತಪ್ಪಿಸುವ ಯತ್ನ ನಡೆದಿದೆ.

Advertisement

ದೆಹಲಿ ಮತ್ತು ಲಖನೌ ನಡುವೆ ಬರೇಲಿ-ವಾರಣಾಸಿ ಎಕ್ಸ್‌ಪ್ರೆಸ್ ರೈಲು ಸಾಗುವ ಹಳಿಯ ಮೇಲೆ ಸುಮಾರು 6 ಕೆಜಿಗೂ ಹೆಚ್ಚು ತೂಕದ ಎರಡು ಅಡಿ ಉದ್ದದ ಮರದ ತುಂಡುಗಳು ಕಂಡುಬಂದಿದೆ.  ರೈಲು ಅದಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಮರದ ತುಂಡುಗಳು ಲೋಹದ ಚಕ್ರಗಳ ಅಡಿಯಲ್ಲಿ ಸಿಕ್ಕಿಕೊಂಡಿದೆ. ಲೋಕೋ ಪೈಲಟ್ ರೈಲನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ಹಳಿಗಳ ಮೇಲಿನ ಸಿಗ್ನಲಿಂಗ್ ಸಾಧನವನ್ನು ಹಾನಿಗೊಳಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲಿಹಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯಲ್ಲಿ ಹತ್ತಿರದ ರೈಲು ನಿಲ್ದಾಣವು ಸ್ಟೇಷನ್ ಮಾಸ್ಟರ್‌ಗಳಿಗೆ ಎಚ್ಚರಿಕೆಯನ್ನು ನೀಡಿದ್ದು, ತಪಾಸಣಾ ತಂಡ ಮತ್ತು ಲೋಕೋ ಪೈಲಟ್ ಕಷ್ಟಪಟ್ಟು ಮರವನ್ನು ಹೊರತೆಗೆದರು.

ಇದರಿಂದಾಗಿ ಎರಡು ಗಂಟೆಗಳ ಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕಳೆದ ತಿಂಗಳು ರೈಲ್ವೇ ಆಡಳಿತವು ಸಂಭಾವ್ಯ ರೈಲು ವಿಧ್ವಂಸಕ ಯತ್ನಗಳ ವಿರುದ್ಧ ಜಾಗರೂಕವಾಗಿದೆ ಮತ್ತು ಹಲವಾರು ರಾಜ್ಯಗಳಲ್ಲಿ ಎನ್‌ಐಎ ಮತ್ತು ಪೊಲೀಸರು ಸೇರಿದಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದರು.


Spread the love

LEAVE A REPLY

Please enter your comment!
Please enter your name here