ಗ್ರಾಮಸ್ಥರ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡಿ: ಇಒ ಚಂದ್ರಶೇಖರ ಕಂದಕೂರ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳ ಕುರಿತು ಸಾರ್ವಜನಿಕರು ನೀಡುವ ಯಾವುದೇ ದೂರಿಗೆ ಗ್ರಾ.ಪಂ ಸಿಬ್ಬಂದಿ ವರ್ಗ ತಕ್ಷಣ ಸ್ಪಂದಿಸಬೇಕು ಎಂದು ಗಜೇಂದ್ರಗಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರು ಗ್ರಾ.ಪಂ ಸಿಬ್ಬಂದಿಗಳಿಗೆ ಸೂಚಿಸಿದರು.

Advertisement

ತಾಲೂಕಿನ ಸೂಡಿ ಗ್ರಾ.ಪಂ ಕಚೇರಿಯಲ್ಲಿ ಸಿಬ್ಬಂದಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸಾರ್ವಜನಿಕ ಸ್ನೇಹಿಯಾಗಿ ಸಿಬ್ಬಂದಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಸೂಡಿ ಮತ್ತು ದ್ಯಾಮಹುಣಸಿ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗಬೇಕು. ಮಲಪ್ರಭಾ ನೀರು ಬಿಡುಗಡೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡಬೇಕು. ಕುಡಿಯುವ ನೀರು ಎಲ್ಲೂ ಪೋಲಾಗದಂತೆ ನಿಗಾವಹಿಸಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಗ್ರಾ.ಪಂ ಸಿಬ್ಬಂದಿ ಒದಗಿಸಬೇಕು. ಸರಿಯಾಗಿ ಕುಡಿಯುವ ನೀರು ಬಿಡದೇ, ಸಾರ್ವಜನಿಕರಿಗೆ ಸ್ಪಂದಿಸದೇ ಇದ್ದರೆ ವಾಟರ್‌ಮನ್ ಸಂಗಯ್ಯ ಅವರನ್ನು ಕೆಲಸದಿಂದ ತಗೆದುಹಾಕಿ ಎಂದು ಪಿಡಿಒ ಅವರಿಗೆ ಸೂಚಿಸಿದರು.

ಸಭೆಯಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ರೋಣ ಮತ್ತು ಗಜೇಂದ್ರಗಡದ ಶಾಖಾಧಿಕಾರಿ ಮಹದೇವಪ್ಪ ಅವರಿಗೆ ಸೂಡಿ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರನ್ನು ವಿಳಂಬ ಮಾಡದೇ ಬಿಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಸೂಡಿ ಗ್ರಾ.ಪಂ ಪಿಡಿಒ ಬಸವರಾಜ ವಡ್ಡರ, ತೆರಿಗೆ ಸಂಗ್ರಹಕಾರ ದುರ್ಗಪ್ಪ, ಪಂಚಾಯಿತಿ ಕಾರ್ಯದರ್ಶಿ ಮುಕ್ತಾಬಾಯಿ ಜಾದವ್, ವಾಟರ್‌ಮನ್ ಸಂಗಯ್ಯ ಮತ್ತು ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

ಗ್ರಾ.ಪಂ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀದಿ ದೀಪ ಬೆಳಗುವಂತಿರಬೇಕು. ಬೀದಿ ದೀಪದ ಕಂಬಗಳಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕ, ವಿದ್ಯುತ್ ಬಲ್ಬುಗಳ ಅಳವಡಿಕೆಗೆ ಕ್ರಮ ವಹಿಸಬೇಕು. ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಜಾಗೃತಿ ವಹಿಸಬೇಕು. ಕಸ ವಿಲೇವಾರಿ ಕಾರ್ಯ ಪ್ರತಿನಿತ್ಯ ನಡೆಯಬೇಕು. ಅನಧಿಕೃತವಾಗಿ ಗೈರಾಗಿ ಕಸ ವಿಲೇವಾರಿ ಮಾಡದಿದ್ದರೆ ಅಂತಹ ಸಿಬ್ಬಂದಿಗಳ ವಿರುದ್ಧ ಪಿಡಿಒ ಕ್ರಮ ವಹಿಸಬೇಕು. ಇಲ್ಲವೇ ಪಿಡಿಒ ಅವರ ವಿರುದ್ಧ ನಾನು ಕ್ರಮ ವಹಿಸುತ್ತೇನೆಂದು ಚಂದ್ರಶೇಖರ ಕಂದಕೂರ ಎಚ್ಚರಿಸಿದರು.


Spread the love

LEAVE A REPLY

Please enter your comment!
Please enter your name here