ಡಿ.ಜಿ. ಕುಲಕರ್ಣಿಯವರು ಸನ್ 1990ರಲ್ಲಿ ಗಜೇಂದ್ರಗಡ ತಾಲೂಕಿನ ನರೇಗಲ್ಲ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಕಿವುಡ ಮಕ್ಕಳ ವಸತಿಯುತ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡು ಕಳೆದ 34 ವರ್ಷಗಳಿಂದ ಅವಿರತವಾಗಿ ಸುದೀರ್ಘ ಕಾಲ ವಿಕಲಚೇತನರಿಗೆ ಶಿಕ್ಷಣ ನೀಡುವಲ್ಲಿ ಸದಾ ಶ್ರಮಿಸುತ್ತಿದ್ದಾರೆ. ಆ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಸವೆಸಿದ್ದಾರೆ. ಇಂತಹ ಶ್ರೇಷ್ಠ ಶ್ರಮಜೀವಿ, ಪ್ರಾಮಾಣಿಕ ಶಿಕ್ಷಕ ಫೆಬ್ರುವರಿ 29ರಂದು ಅವರ ಅಮೋಘ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ನಮ್ಮೆಲ್ಲರ ನೆಚ್ಚಿನ ಶಿಕ್ಷಕರಾದ ದತ್ತಾತ್ರಯ ಗೋವಿಂದ ಕುಲಕರ್ಣಿಯವರು ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದವರಾಗಿದ್ದು, ಸಂಸ್ಥೆಯ ಆಗಿನ ಅಧ್ಯಕ್ಷರಾದ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದ ಲಿಂ. ಪೂಜ್ಯ ಶ್ರೀ ಅಭಿನವ ಅನ್ನದಾನ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ಅಪ್ಪಣೆ ಮೇರೆಗೆ ಸೇವೆಯನ್ನು ಪ್ರಾರಂಭಿಸಿ, ಶಾಲೆಯ ಕಿವುಡ-ಮೂಗ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳೆಂದು ಭಾವಿಸಿ ತಮ್ಮದೇ ವಿಶಿಷ್ಟ ರೀತಿಯ ಸಂಜ್ಞಾ ಭಾಷೆಯಲ್ಲಿ ಉತ್ತಮ ಶಿಕ್ಷಣ ನೀಡಿ, ಮಾತಿನ ತರಬೇತಿ ನೀಡುತ್ತಾ ಸನ್ನೆ ಭಾಷೆ ಶಿಕ್ಷಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಹಲವಾರು ಬಗೆಯ ವಿವಿಧ ಪಾಠೋಪಕರಣ ತಯಾರಿಸಿ ಪಾಠ ಬೋಧನೆ ಮಾಡುತ್ತಾರೆ. ಮಕ್ಕಳಿಂದಲೂ ಪಾಠೋಪಕರಣ, ಮಣ್ಣಿನಿಂದ ಮೂರ್ತಿ, ಹಾಳೆಯಿಂದ ಚಿತ್ರಪಟ, ರಟ್ಟಿನಿಂದ ವಿಶಿಷ್ಟ ಬಗೆಯ ಮಾದರಿಗಳನ್ನು ಮಾಡಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಮಕ್ಕಳಿಗೆ ಸ್ಫೂರ್ತಿ ನೀಡುತ್ತಾ ಅವರ ಪ್ರೀತಿಗೆ ಪಾತ್ರರಾಗಿ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದಾರೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಒಳ್ಳೆಯ ಗುಣ, ಸಂಸ್ಕಾರ, ಸಂಸ್ಕೃತಿಯನ್ನು ನೀಡಿ ಉತ್ತಮ ನಾಗರಿಕರನ್ನಾಗಿ ತಯಾರುಗೊಳಿಸುತ್ತಿದ್ದಾರೆ. ಇವರು ಮಕ್ಕಳಿಗೆ ಕಿರು ನಾಟಕ ಮಾಡಿಸಿದ್ದಾರೆ. ಕಿರು ನಾಟಕದ ಕಥೆಯನ್ನು ಸ್ವತಃ ಶಿಕ್ಷಕರೇ ಕೃಷಿ ಮಾಡಿ, ನಾಟಕದ ನಿರ್ದೇಶನ ನೀಡಿ ನಾಟಕ, ರೂಪಕಗಳನ್ನು ಮಾಡಿಸಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.
ಶಾಲೆಯ ಎಲ್ಲ ಶಿಕ್ಷಕರೊಂದಿಗೆ ಸೇರಿ ಈ ಮೂಕ ಮಕ್ಕಳಿಗೆ ಸನ್ನೆ ಭಾಷೆಯ ಮೂಲಕ ನಾಟಕ ಮಾಡಿಸಿ ಎಲ್ಲರ ಹೊಗಳಿಕೆಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಬಗ್ಗೆಯೂ ಹೆಚ್ಚಿನ ಪ್ರೋತ್ಸಾಹ ನೀಡಿ ಅದರಲ್ಲಿ ಆಸಕ್ತಿ ಬೆಳೆಸಿ ದೈಹಿಕ ಶಿಕ್ಷಕರೊಂದಿಗೆ ಒಳ್ಳೆಯ ತರಬೇತಿ ಕೊಡಿಸಿ ವಿವಿಧ ಕ್ರೀಡೆಯಲ್ಲಿ ಸ್ಪರ್ಧಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಇದೇ ರೀತಿ ಮಕ್ಕಳಿಂದ ಕಿರು ನಾಟಕ, ಕೋಲಾಟ, ಜಾನಪದ ನೃತ್ಯ ಮುಂತಾದ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿ ಪಡೆದಿದ್ದಾರೆ.
ಶಾಲೆಯ ಕಿವುಡ ಮಕ್ಕಳಿಗೆ ಕಸೂತಿ, ಚಿತ್ರಕಲೆ, ಟೇಲರಿಂಗ್, ತೋಟಗಾರಿಕ್ಗೆ ಸಂಬಂಧಿಸಿದ ಶಿಕ್ಷಕರಿಂದ ತರಬೇತಿ ಕೊಡಿಸಿ ಮಕ್ಕಳ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಈ ಶಿಕ್ಷಕರು ಸುಮಾರು 30 ವರ್ಷಗಳ ಕಾಲ ಶಾಲೆಯಲ್ಲಿ ಮಕ್ಕಳೊಂದಿಗೆ ವಾಸ್ತವ್ಯ ಮಾಡಿ ಮಕ್ಕಳ ಯೋಗಕ್ಷೇಮ ನೋಡಿಕೊಂಡಿದ್ದಾರೆ. ಈ ಶಾಲೆಯ ಮಕ್ಕಳಿಗೆ ಸರ್ಕಾರದಿಂದ ಹಾಗೂ ಸಂಘ-ಸಂಸ್ಥೆಗಳಿಂದ, ವಯಕ್ತಿಕ ಶ್ರವಣ ಸಾಧನ ಕೊಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಿಂದ ಯೋಗ ತರಬೇತಿ ಹಾಗೂ ಮಲ್ಲಕಂಬ ತರಬೇತಿ ನೀಡಿಸಿ ಇವುಗಳ ಪ್ರದರ್ಶನ ಮಾಡಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಡಿ.ಜಿ. ಕುಲಕರ್ಣಿ ಮಕ್ಕಳ ಶೌಚಾಲಯವನ್ನು ಹಲವಾರು ಬಾರಿ ಸ್ವತಃ ಸ್ವಚ್ಛಗೊಳಿಸಿದ್ದಾರೆ. ಇವರು ಶಾಲೆಯಲ್ಲಿ ಸ್ವಚ್ಛತೆ, ಶಿಸ್ತಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಶಾಲಾ ವೇಳೆಗೆ ಮಹತ್ವ ಕೊಟ್ಟು ಎಲ್ಲರೂ ಸರಿಯಾಗಿ ಶಾಲಾ ಸೇವೆಯಲ್ಲಿ ತೊಡಗುವಂತೆ ಪ್ರೇರೇಪಿಸಿದ್ದಾರೆ. ಶಾಲೆಯ ಕಾರ್ಯಾಲಯ, ತರಗತಿಯನ್ನು ಬಹಳ ಅಂದವಾಗಿಟ್ಟು ಶಾಲಾ ಕಾಗದಪತ್ರ, ಫೈಲ್‌ಗಳ ನಿರ್ವಹಣೆ ಚೆನ್ನಾಗಿ ಮಾಡಿ ಮೆಚ್ಚುಗೆ ಪಡೆದು, ಇಲಾಖಾ ಅಧಿಕಾರಿಗಳು, ಸಂಸ್ಥೆ ಸದಸ್ಯರು ಹಾಗೂ ಪಾಲಕರೊಂದಿಗೆ ಅಲ್ಲದೇ ಶಾಲಾ ಸಿಬ್ಬಂದಿಗಳೊಂದಿಗೆ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಹೀಗಾಗಿ ಶಾಲೆಗೆ ಸರ್ಕಾರದಿಂದ ಉತ್ತಮ ಶಾಲೆ ಎಂದು ರಾಜ್ಯ ಪ್ರಶಸ್ತಿ ಬಂದಿದೆ. ಡಿ.ಜಿ. ಕುಲಕರ್ಣಿಯವರ ಸಾಧನೆಗೆ 5 ಪ್ರಶಸ್ತಿಗಳು ದೊರೆತಿದ್ದು, ಅದರಲ್ಲಿ ಸರಕಾರದಿಂದ ಉತ್ತಮ ಶಿಕ್ಷಕರ ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದೆ. ಈ ಸಾಧನೆಗೆ ಸಂಸ್ಥೆಯ ಈಗಿನ ಅಧ್ಯಕ್ಷರಾದ ಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಆಶೀರ್ವಾದ ಕಾರಣ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಇವರೊಬ್ಬ ಆದರ್ಶ, ಮಾದರಿ ಶಿಕ್ಷಕರಾಗಿದ್ದಾರೆ. ಇವರ ಸಾಧನೆ ನೋಡಿ ಇವರ ಬಗ್ಗೆ `ಕಾಯಕ ನಿಷ್ಠೆಯ ದತ್ತಣ್ಣ’ ಎಂಬ ಪುಸ್ತಕ ಬರೆದಿದ್ದಾರೆ. ಸೇವಾ ನಿವೃತ್ತಿ ಹೊಂದುತ್ತಿರುವ ಇವರಿಗೆ ಶುಭ ಹಾರೈಕೆಗಳು.
– ಸಂಗಮೇಶ ಮೆಣಸಗಿ, ಜಕ್ಕಲಿ.