ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ: ಪರುಷಕಟ್ಟೆ ಸೇರಿದಂತೆ ನೂತನ ಅನುಭವ ಮಂಟಪ ನಿರ್ಮಾಣ ಯೋಜನೆಯ ಪರಿಷ್ಕೃತ ಮೊತ್ತ ರೂ.742 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದ್ದು, ಇಲ್ಲಿಯವರಗೆ ನೂತನ ಅನುಭವ ಮಂಟಪದ ಕಾಮಗಾರಿಗೆ ರೂ.375 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ತಿಳಿಸಿದರು.
ಅವರು ವಿಧಾನ ಪರಿಷತ್‌ನಲ್ಲಿ ಸದಸ್ಯ ಡಾ. ಎಂ.ಜಿ. ಮುಳೆ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.
ನೂತನ ಅನುಭವ ಮಂಟಪದ ಕಾಮಗಾರಿಯು ಪ್ರಗತಿಯಲ್ಲಿದ್ದು, ಶರಣರ ವಚನಗಳನ್ನು ಸಂಗ್ರಹಣೆ ಮಾಡುವ ಕೆಲಸ ಪೂರ್ಣಗೊಳಿಸಲಾಗಿದೆ. ಅವುಗಳನ್ನು ಧ್ವನಿ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ನೂತನ ಅನುಭವ ಮಂಟಪದ ಒಳಾಂಗಣದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವತಿಯಿಂದ ಶರಣ-ಶರಣೆಯರ ಒಟ್ಟು 29 ಸ್ಮಾರಕ/ತಾಣಗಳನ್ನು ಅಭಿವೃದ್ಧಿಗೊಳಿಸಿ ಸಂರಕ್ಷಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ 2005ರಿಂದ ಇಲ್ಲಿಯವರೆಗೆ ಸುಮಾರು 17 ಸ್ಮಾರಕಗಳ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಹಾಗೂ ಉಳಿದ ಸ್ಮಾರಕಗಳನ್ನು ಅನುದಾನದ ಲಭ್ಯತೆಯಂತೆ ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುತ್ತಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಒಳಪಡುವ ಚಾಲುಕ್ಯರ ಹಳೆಯ ಕೋಟೆಯಲ್ಲಿ ಕೋಟೆಯ ಇತಿಹಾಸವನ್ನು ಧ್ವನಿ-ಬೆಳಕು ಮತ್ತು ಲೇಸರ್ ಶೋ ಮೂಲಕ ಜನರಿಗೆ ತಿಳಿಸಲಾಗುತ್ತಿದೆ ಹಾಗೂ ಬಸವ ವನದ ಉದ್ಯಾನವನಕ್ಕೆ ತಡೆಗೋಡೆಯನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.



