ಅಳತೆಗೆ ತಕ್ಕ ಕೆಲಸ, ಕೆಲಸಕ್ಕೆ ತಕ್ಕ ಕೂಲಿ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದ್ದು, ಕೂಲಿ ಕಾರ್ಮಿಕರನ್ನು ಗುರಿಯಾಗಿ ಇಟ್ಟುಕೊಂಡು ಈ ಯೋಜನೆ ಮಾಡಲಾಗಿದೆ. ಪ್ರಪಂಚದ ಯಾವುದೇ ದೇಶದಲ್ಲೂ ಇಂತಹ ಯೋಜನೆಯಿಲ್ಲ ಎಂದು ರೋಣ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಚಿಕ್ಕಮಣ್ಣೂರ ಗ್ರಾ.ಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಾತನಾಡುತ್ತಿದ್ದರು.

ಅಳತಕ್ಕೆ ತಕ್ಕ ಕೂಲಿ, ಕೂಲಿಗೆ ತಕ್ಕ ಹಣ ನರೇಗಾ ಯೋಜನೆಯಡಿ ನಿಮಗೆ ಸಿಗುತ್ತದೆ. ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸಕ್ಕಾಗಿ ಅಲೆದಾಡದೇ ತಮ್ಮ ಸ್ವಂತ ಗ್ರಾಮದಲ್ಲಿಯೇ ಬೇಡಿಕೆಯ ಪ್ರಕಾರ 100 ದಿನಗಳ ಖಾತ್ರಿ ಕೆಲಸವನ್ನು ಪಡೆಯಲು ಸಾಧ್ಯ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿರಿಯ ನಾಗರಿಕರು, ವಿಧವೆಯರು, ವಿಶೇಷ ಚೇತನರಿಗೆ ನರೇಗಾದಡಿ ದುಡಿಯಲು ಹೆಚ್ಚಿನ ಆದ್ಯತೆ, ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50 ರಿಯಾಯಿತಿಯಿದ್ದು, ಇದನ್ನು ಚಟುವಟಿಕೆ ಮೂಲಕ ಪ್ರಚಾರ ಮಾಡಲಾಗಿದೆ ಎಂದರು.

ಈ ಬಾರಿ ಗರಿಷ್ಠ ಮಟ್ಟದ ಕೆಲಸವನ್ನು ನಿಮಗೆ ಕೊಡುತ್ತೇವೆ. ಮಳೆ ಬಿದ್ದು ಕೃಷಿ ಚಟುವಟಿಕೆ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು. ಪರಸ್ಥಳಕ್ಕೆ ಗುಳೆ ಹೋಗದೇ ಬೇಸಿಗೆ ಅವಧಿಯಲ್ಲಿ ಇದ್ದೂರಲ್ಲೇ ಕೆಲಸ ಮಾಡಿ. ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ 370 ರೂಪಾಯಿ ನಿಮ್ಮ ವೈಯಕ್ತಿಕ ಖಾತೆಗೆ ಜಮಾವಣೆಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ರಶೀದ ಹುಣಸಿಮರದ, ನರೇಗಾ ಸಿಬ್ಬಂದಿಗಳು ಹಾಗೂ ತಾ.ಪಂ ಸಿಬ್ಬಂದಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here