ವಿಜಯಸಾಕ್ಷಿ ಸುದ್ದಿ, ಗದಗ: ತಾಯಿಗಿಂತ ಮಿಗಿಲು ಯಾರೂ ಇಲ್ಲ. ತಂದೆ-ತಾಯಿಯೇ ದೇವರು. ಮಾತು ಬಾರದ ಮಗುವಿಗೆ ಮಾತು ಕಲಿಸುವವಳು ಅವ್ವ. ಪ್ರತಿಯೊಬ್ಬರೂ ಬದುಕಿನಲ್ಲಿ ತಂದೆ-ತಾಯಿಯ ಋಣವನ್ನು ತೀರಿಸುವ ಕೆಲಸ ಮಾಡಬೇಕು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2779ನೇ ಶಿವಾನುಭವದಲ್ಲಿ ಮಾತನಾಡಿದ ಶ್ರೀಗಳು, ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಮಾತು ಸತ್ಯ. ಕೆಟ್ಟ ಮಕ್ಕಳು ಹುಟ್ಟಬಹುದು, ಕೆಟ್ಟ ತಾಯಿ ಇರಲಾರಳು. ಮಕ್ಕಳ ಲಾಲನೆ-ಪಾಲನೆ ಮಾಡುವ ಮೂಲಕ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಅವ್ವ ಹೊರುತ್ತಾಳೆ. ಮಕ್ಕಳಲ್ಲಿ ಬೇಧ-ಭಾವ ಮಾಡದೇ ಸಮಾನವಾಗಿ ಬೆಳೆಸುವ ಅವ್ವ ಮಕ್ಕಳ ಪಾಲಿನ ದೇವರು. ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವ್ವನ ಋಣವನ್ನು ಅವ್ವ ಸೇವಾ ಟ್ರಸ್ಟ್ ಮೂಲಕ ತೀರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಹುಬ್ಬಳ್ಳಿಯ ಎಸ್‌ಜೆಎಂ ಕಾಲೇಜಿನ ಡಾ. ಸುಪ್ರಿಯಾ ಮಾಲಶೆಟ್ಟಿ ಮಾತನಾಡಿ, ಸಾವಿರಾರು ತಂದೆಗಿಂತ ಒಬ್ಬ ತಾಯಿ ಶ್ರೇಷ್ಠ. ಸಕಲರಿಗೂ ಪೂಜ್ಯನೀಯ ತಾಯಿ. ಅವ್ವ ಬದುಕು ನೀಡುವುದರ ಜೊತೆಗೆ ಬದುಕುವ ಕಲೆಯನ್ನು ಕಲಿಸುತ್ತಾಳೆ. ಅವ್ವಳ ಪ್ರೀತಿಯಲ್ಲಿ ಅಪೇಕ್ಷೆ ಇಲ್ಲ. ಮಕ್ಕಳಿಗೋಸ್ಕರ ಏನು ಬೇಕಾದರೂ ಮಾಡುವಳು. ಜೀವನದ ಪಾಠ ಕಲಿಸುತ್ತಾಳೆ. ತಾಯಿಯ ಶ್ರದ್ಧೆ, ಸಹನೆ, ಪ್ರಾಮಾಣಿಕತೆ, ಪ್ರೀತಿ ವರ್ಣಿಸಲಸಾಧ್ಯ. ಬಸವಣ್ಣನವರ ವಚನಗಳು ಅವ್ವನ ಸೆರಗು ಇದ್ದಂತೆ ಎಂದರು.
ಎಲ್‌ಎಲ್‌ಎಂ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಹನಾ ಅನಂತ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು. ಸನ್ಮಾನೋತ್ತರವಾಗಿ ಮಾತನಾಡಿದ ಸಹನಾ ಕಾರ್ಕಳ, ಮಕ್ಕಳ ಜೀವನದಲ್ಲಿ ಅವ್ವ-ಅಪ್ಪನ ಪಾತ್ರ ಬಹು ದೊಡ್ಡದು ಎಂದರು.
ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಶಶಿ ಸಾಲಿ ಮಾತನಾಡಿ, ಸಭಾಪತಿಗಳಾದ ಬಸವರಾಜ ಹೊರಟ್ಟಿಯವರಿಗೆ ತಾಯಿಯ ಬಗ್ಗೆ ಅಪಾರವಾದ ಪ್ರೀತಿ ಇದ್ದುದರಿಂದ ಅವ್ವನ ನೆನಪು ಸದಾ ಇರಲೆಂದು ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿ ಅನೇಕ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದರು.
ಅತಿಥಿಗಳಾಗಿ ಆಗಮಿಸಿದ ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ, ಕ.ಸಾ.ಪ ಧಾರವಾಡ ಅಧ್ಯಕ್ಷ ಲಿಂಗರಾಜ ಅಂಗಡಿ, ಮಾಧ್ಯಮ ಪ್ರತಿನಿಧಿಗಳಾದ ಅನಂತ ಕಾರ್ಕಳ ಉಪಸ್ಥಿತರಿದ್ದರು. ಅವ್ವ ಸೇವಾ ಟ್ರಸ್ಟ್ ವತಿಯಿಂದ ಮಹಿಳಾ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆಯನ್ನು ಗದಗ ಅವ್ವ ಸೇವಾ ಟ್ರಸ್ಟ್ ಸಂಚಾಲಕರಾದ ಡಾ. ಬಸವರಾಜ ಧಾರವಾಡರವರು ಮಾಡಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನಸಂಗೀತ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥಪಠಣವನ್ನು ಅವನಿ ಎಂ. ಪುಣೇಕರ, ವಚನ ಚಿಂತನವನ್ನು ಶ್ರೇಯಾ ಡಿ. ವಿಠ್ಠಲ್ಕರ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರ ಸಂಘ ಗದಗ ಹಾಗೂ ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಇವರು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ, ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಅತಿಥಿಗಳಾಗಿ ಆಗಮಿಸಿದ ಗದಗಿನ ಅವ್ವ ಸೇವಾ ಟ್ರಸ್ಟ್‌ನ ಸಂಚಾಲಕರಾದ ಡಾ. ಬಸವರಾಜ ಧಾರವಾಡ ಮಾತನಾಡಿ, ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಲಿಂ. ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ 2011ರಲ್ಲಿ ಉದ್ಘಾಟನೆಯಾದ ಅವ್ವ ಸೇವಾ ಟ್ರಸ್ಟ್ ಹತ್ತು ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ಹಾಕಿಕೊಂಡು ದೀನ-ದಲಿತರಿಗೆ, ದಿವ್ಯಾಂಗರಿಗೆ, ಮಹಿಳೆಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ವಿಶೇಷ ಸಾಧನೆ ಮಾಡಿದವರಿಗೆ ಗೌರವ ಸಲ್ಲಿಸುತ್ತ ಬಂದಿದೆ. ಶ್ರೀಮಠವು ಶಿವಾನುಭವದ ಮೂಲಕ ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.



