ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಕೋಗನೂರ ಗ್ರಾ.ಪಂ ವ್ಯಾಪ್ತಿಯ ಗೋವನಕೊಪ್ಪ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಹಳ್ಳದ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಅವರು ಮಾತನಾಡಿ, ನರೇಗಾ ಯೋಜನೆಯಡಿ ಉದ್ಯೋಗ ಖಾತರಿ ಕೂಲಿ ಮೊತ್ತ 2025ರ ಎಪ್ರಿಲ್ 1ರಿಂದ 349 ರಿಂದ 370 ರೂ.ಗೆ ಹೆಚ್ಚಳವಾಗಿದೆ. ಕೂಲಿಕಾರರು ಗ್ರಾಮ ಪಂಚಾಯಿತಿಗೆ ನಮೂನೆ 6ರಲ್ಲಿ ಕೆಲಸದ ಬೇಡಿಕೆ ಸಲ್ಲಿಸಿ, ಕೆಲಸ ಪಡೆಯಬೇಕು. ಉದ್ಯೋಗ ಖಾತರಿ ಯೋಜನೆಯಡಿ ನೋಂದಾಯಿತ ಕುಟುಂಬಕ್ಕೆ ವರ್ಷಕ್ಕೆ 100 ಮಾನವ ದಿನಗಳ ಕೆಲಸ ಮಾಡಲು ಅವಕಾಶವಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಾಬ್ ಕಾರ್ಡ್ ಇಲ್ಲದೆ ಇರುವ ಕೂಲಿ ಕಾರ್ಮಿಕರು ತಕ್ಷಣವೇ ದಾಖಲಾತಿಗಳನ್ನು ನೀಡಿ ಹೊಸ ಜಾಬ್ ಕಾರ್ಡ್ಗಳನ್ನು ಪಡೆದುಕೊಂಡು ಯೋಜನೆಯ ಲಾಭವನ್ನು ಪಡೆಯಿರಿ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ, ಬೇಸಿಗೆಯ ಬಿಸಿಲು ಹೆಚ್ಚಾಗಿರುವುದರಿಂದ ಫಲಾನುಭವಿಗಳು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ನಮ್ಮ ದೇಹದ ಆರೋಗ್ಯ ಬಹು ಮುಖ್ಯವಾಗಿದ್ದು, ಹೆಚ್ಚು ನೀರು ಕುಡಿಯಿರಿ, ನೀರನ್ನು ಕುದಿಸಿ ಆರಿಸಿ ಕುಡಿಯಿರಿ ಎಂದು ಸಲಹೆ ನೀಡಿದರು.
ಕೆಲಸ ಪ್ರಾರಂಭವಾಗಿದೆ ಎಂದು ಎನ್‌ಎಂಆರ್‌ನಲ್ಲಿ ಹೆಸರು ಇಲ್ಲದೆ ಯಾವ ಕೂಲಿಕಾರರೂ ಕೆಲಸಕ್ಕೆ ಬರುವಂತಿಲ್ಲ. ಒಂದು ವೇಳೆ ಬಂದ ಸಂರ್ದಭದಲ್ಲಿ ಅವರಿಗೆ ಕೂಲಿ ಹಣ ಪಾವತಿಯಾಗುವುದಿಲ್ಲ. ಹಾಗಾಗಿ ಕೂಲಿಕಾರರು ಎನ್‌ಎಂಆರ್ ಹಾಕಿಸಿ ಕೆಲಸಕ್ಕೆ ಬರುವಂತೆ ಕೂಲಿಕಾರರಿಗೆ ಸೂಚಿಸಿದರು.
ಬೇಸಿಗೆಯಲ್ಲಿ ಅಂದರೆ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಇಲ್ಲದ ಕಾರಣ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರು ಮತ್ತು ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ನರೇಗಾ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳು, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಹಾಜರಿದ್ದರು.
ಕೂಲಿಕಾರರ ಅಳತೆಗೆ ಅನುಸಾರವಾಗಿ ಕೂಲಿ ಪಾವತಿಯಾಗುತ್ತದೆ. ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು. ಪ್ರತಿ ದಿನ ಎರಡು ಬಾರಿ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ. ಕೂಲಿಕಾರರು ಎರಡೂ ಹಾಜರಾತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಹಾಜರಾತಿ ಹಾಕಿಸಬೇಕು. ಒಂದು ವೇಳೆ ಬೆಳಗಿನ ಹಾಜರಾತಿ ಹಾಕಿಸಿ ಮದ್ಯಾಹ್ನದ ಹಾಜರಾತಿ ಹಾಕಿಸದಿದ್ದರೆ ತಮಗೆ ಆ ದಿನದ ಕೂಲಿ ಪಾವತಿಯಾಗುವುದಿಲ್ಲ ಎಂದು ಆರ್.ವಿ. ದೊಡ್ಡಮನಿ ತಿಳಿಸಿದರು.