ವಿಜಯಸಾಕ್ಷಿ ಸುದ್ದಿ, ಗದಗ: ಸಮಾನತೆಯುಳ್ಳ ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರ ಮೌಲ್ಯ, ತತ್ವ, ಅಧ್ಯಯನಶೀಲತೆ ಹಾಗೂ ಸಂವಿಧಾನದ ಜಾಗೃತಿ ಇಂದಿನ ಅಗತ್ಯವಾಗಿದ್ದು, ಕರ್ನಾಟಕ ದಲಿತ ನೌಕರರ ಒಕ್ಕೂಟದ ಗದಗ ಜಿಲ್ಲಾ ಶಾಖೆ ಈ ನಿಟ್ಟಿನಲ್ಲಿ ಜನಪರವಾಗಿ ಒಗ್ಗೂಡಿ ಮತ್ತಷ್ಟು ಉತ್ತಮ ಕಾರ್ಯಗಳನ್ನು ಮಾಡಬೇಕೆಂದು ಕಾನೂನು, ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಇಲ್ಲಿನ ಲಾಯನ್ಸ್ ಸಭಾಭವನದಲ್ಲಿ ಗದಗ ಜಿಲ್ಲಾ ಕರ್ನಾಟಕ ದಲಿತ ನೌಕರರ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಹಾಗೂ ದಲಿತ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿ, ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಗ್ಗಟ್ಟಾಗಿ ಹೋರಾಡುವ ರೀತಿಯೇ ರಾಷ್ಟ್ರ ಕಟ್ಟುವ ಕಾರ್ಯದಲ್ಲೂ ಸಹ ಸಮರ್ಪಿತರಾಗಿ ಕಾರ್ಯನಿರ್ವಹಿಸಬೇಕು. ಜನರಲ್ಲಿ ಸಂವಿಧಾನದ ಮೌಲ್ಯಗಳ ಕುರಿತು ಜಾಗೃತಿ ವಹಿಸಬೇಕು ಎಂದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಕ್ಷೇತ್ರದಲ್ಲೂ ಸಹ ಮೀಸಲಾತಿಯ ಅಗತ್ಯವಿದ್ದು, ಅದರ ಸಂಪೂರ್ಣ ಅನುಷ್ಠಾನ ಅವಶ್ಯ. ಈ ಹಿನ್ನೆಲೆಯಲ್ಲಿ ಸರ್ಕಾರಿ ದಲಿತ ನೌಕರರ ಒಕ್ಕೂಟ ನೊಂದವರ, ಅವಕಾಶ ವಂಚಿತರ, ದೀನ ದಲಿತರ ಆಶಾಕಿರಣವಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಸಮ ಸಮಾಜದ ನಿರ್ಮಾಣಕ್ಕಾಗಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಪ್ರೊ. ಅರ್ಜುನ ಗೊಳಸಂಗಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರರ ಜೀವನ, ಬದುಕು ಬರಹ ಹಾಗೂ ಸಂವಿಧಾನ ಆಶಯಗಳ ಮೇಲೆ ಬೆಳಕು ಚೆಲ್ಲಿದರು. ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ಜೆ.ಸಿ ಸಂದರ್ಭೋಚಿತವಾಗಿ ಮಾತನಾಡಿದರು.
ದಲಿತ ಮುಖಂಡರಾದ ಎಸ್.ಎನ್. ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಮುಂಬರುವ ದಿನಮಾನಗಳಲ್ಲಿ ಒಗ್ಗಟ್ಟನಿಂದ ಮುಂದುವರೆಯುವ ಮೂಲಕ ನೌಕರರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳು ಯತ್ನಿಸಬೇಕೆಂದು ಅಭಿಪ್ರಾಯಪಟ್ಟರು.
ವೇದಿಕೆಯ ಮೇಲೆ ಡಿಡಿಪಿಐ ಆರ್.ಎಸ್. ಬುರಡಿ, ಬಿಇಓ ವಿ.ವಿ. ನಡುವಿನಮನಿ, ಬಿ.ಎಫ್. ಪೂಜಾರ, ಪ್ರೊ. ಸತೀಶ ಪಾಸಿ, ಡಿ.ಜಿ. ಜೋಗಣ್ಣವರ, ಎಂ.ಕೆ. ಲಮಾಣಿ, ಡಿ.ಎಸ್. ಮುಂದಿನಮನಿ, ದುರ್ಗಪ್ಪ ಹರಿಜನ, ನ್ಯಾಯವಾದಿ ಮೋಹನ ಭಜಂತ್ರಿ, ಪ್ರಕಾಶ ದೊಡ್ಡಮನಿ, ಅಶೋಕ ಕುಂದಗೋಳ, ತಾಲೂಕಾಧ್ಯಕ್ಷ ಎಚ್.ಆರ್. ಓಲೆಕಾರ, ಎನ್.ಎಂ. ಅರಳಿಗಿಡದ, ಶ್ರೀಕಾಂತ ನರಗುಂದ, ಆನಂದ ಮುಳಗುಂದ, ಲಕ್ಷ್ಮಣ ಗುಡಿಸಲಮನಿ, ನಾರಾಯಣಕುಮಾರ ಬಳ್ಳಾರಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ದಲಿತ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ, ಬಿ.ಎಸ್. ತಳವಾರ ನೌಕರರ ಸಮಸ್ಯೆ, ಅದರ ಪರಿಪಾರೋಪಾಯ ಹಾಗೂ ಮುಂದೆ ಕೈಗೊಳ್ಳಬೇಕಾದ ಹೋರಾಟದ ರೂಪರೇಷೆಗಳನ್ನು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತು ಮಾದರ ಸ್ವಾಗತಿಸಿದರು. ಎಸ್.ಟಿ. ವಾಲ್ಮೀಕಿ ನಿರೂಪಿಸಿದರು.
ವಿಧಾನಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಮಾತನಾಡಿ, ನೌಕರರು ಒಗ್ಗಟ್ಟಿನಿಂದ ಸಂಘಟಿತರಾದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾ ದಲಿತ ನೌಕರರ ಒಕ್ಕೂಟ ಸಮಾಜಮುಖಿ ಕಾರ್ಯ ಮಾಡುವತ್ತ ಗಮನಹರಿಸಬೇಕು ಹಾಗೂ ಒಗ್ಗಟ್ಟಿನಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕೆಂದು ಹೇಳಿದರು.