ಬೆಂಗಳೂರು : ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಮನೆ ಕೆಲಸದಾಕೆಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಆಂಧ್ರದ ಖಾಕಿನಾಡ ಮೂಲದ ಅನ್ನಾರೆಡ್ಡಿ ದುರ್ಗಾ ಬಂಧಿತ ಕಳ್ಳಿಯಾಗಿದ್ದು, ಮನೆ ಕೆಲಸಕ್ಕೆ ಬಂದು 22 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಳು.
ಆಂಧ್ರ ಮೂಲದ ಏಜೆನ್ಸಿ ಮೂಲಕ ಬೆಂಗಳೂರು ಪ್ರಸಿದ್ಧ ಅಪೊಲೊ ಆಸ್ಪತ್ರೆ ವೈದ್ಯೆ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಅಪೊಲೊ ಆಸ್ಪತ್ರೆ ವೈದ್ಯೆ ಶೈಲಜಾ ಕೂಡ ಆಂಧ್ರ ಮೂಲದವರಾಗಿದ್ದು, ಹೀಗಾಗಿ ಪರಿಚಯಸ್ಥ ಆಂಧ್ರ ಮೂಲದ ಏಜೆನ್ಸಿ ಮೂಲಕ ಮಹಿಳೆಯನ್ನ ಕೆಲಸಕ್ಕೆ ಸೇರಿಸಿಕೊಂಡಿದ್ದರು. ವೈದ್ಯೆ ಶೈಲಜಾ ಗೆ ಕ್ಯಾನ್ಸರ್ ಉಂಟಾಗಿದ್ದ ಕಾರಣ ಆಗಾಗ ತೆರಪಿ ಮಾಡಿಸಬೇಕಾಗಿತ್ತು.
ಥೆರಪಿ ಮಾಡಿದ ವೇಳೆ ವೈದ್ಯೆಗೆ ಕೆಲ ಗಂಟೆಗಳ ಕಾಲ ಪ್ರಜ್ಞೆ ಇರುತ್ತಿರಲಿಲ್ಲ. ಈ ವೇಳೆ ಖತರ್ನಾಕ್ ಪ್ಲಾನ್ ಮಾಡಿ ದುರ್ಗಾ ಕಳ್ಳತನ ಮಾಡಿದ್ದಳು. 5 ಇಂಪೋರ್ಟೆಡ್ ವಾಚ್, 1.6 ಕೆಜಿ ಬೆಳ್ಳಿ ವಸ್ತುಗಳು ಡೈಮಂಡ್ ಹಾಗೂ ಚಿನ್ನಾಭರಣ ಕದ್ದಿದ್ದಳು. ತನಿಖೆ ವೇಳೆ ಸಾಲ ತೀರಿಸಲು ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದ್ದು, ಬಂಧಿತ ಆರೋಪಿಯಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.