ಗದಗ: ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಕಾರ್ಮಿಕರು ಕನಿಷ್ಠ ವೇತನ ಹಾಗೂ ಸುರಕ್ಷಾ ಕಿಟ್ ನೀಡುವಂತೆ ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಇದು ಉತ್ಖನನ ಕಾರ್ಯದ 8ನೇ ದಿನದಂದು ನಡೆದಿದೆ.
ಉತ್ಖನನ ಕಾರ್ಯದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು, ಜೊತೆಗೆ ಸುರಕ್ಷತಾ ಕಿಟ್ ಒದಗಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಕಾರ್ಮಿಕರು ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದರು.
ಈ ಹೋರಾಟಕ್ಕೆ ನೆರವು ಕಟ್ಟಡ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಅಶ್ವಥ್ ಮರೇಗೌಡ್ರು ನೇತೃತ್ವ ವಹಿಸಿದ್ದರು. ಕಾರ್ಮಿಕರ ಬೆಂಬಲದೊಂದಿಗೆ ಉತ್ಖನನ ಸ್ಥಳದಲ್ಲಿಯೇ ಧರಣಿ ನಡೆಸಲಾಯಿತು.
ಆದರೆ, ಈ ಪ್ರತಿಭಟನೆಗೆ ಸಂಬಂಧಿಸಿ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆದಿದೆ.
ಉತ್ಖನನ ಕಾರ್ಯದಲ್ಲಿ ಸುಮಾರು 35ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಭಾಗಿಯಾಗಿದ್ದು, ಮುಂಜಾನೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾರ್ಮಿಕರಿಗೆ ಕೈಗೆ ಹೆಡ್ಲೈಟ್, ಕಾಲಿಗೆ ಶೂ ಸೇರಿದಂತೆ ಅಗತ್ಯ ಸುರಕ್ಷತಾ ಕಿಟ್ ನೀಡಿಲ್ಲ ಎಂದು ತಿಳಿದುಬಂದಿದೆ.
ಈ ವಿಷಯ ತಿಳಿದ ನಂತರ ನೆರವು ಕಟ್ಟಡ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಅಶ್ವಥ್ ಮರೇಗೌಡ್ರು ಬೆಂಗಳೂರಿನಿಂದ ಲಕ್ಕುಂಡಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. “ವರದಿ ನೋಡಿ ನಾನು ಇಲ್ಲಿ ಬಂದಿದ್ದೇನೆ. ಕಾರ್ಮಿಕರ ಜೀವದ ಜೊತೆ ಆಟ ಆಡಬಾರದು. ಕೂಡಲೇ ಸುರಕ್ಷತಾ ಕಿಟ್ ಹಾಗೂ ಅಗತ್ಯ ಸೌಲಭ್ಯ ನೀಡಬೇಕು” ಎಂದು ಅವರು ಆಗ್ರಹಿಸಿದರು.
ಸ್ಥಿತಿಗತಿ ಬಿಗಡಾಯಿಸುತ್ತಿದ್ದಂತೆ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಅಶ್ವಥ್ ಮರೇಗೌಡ್ರು ಸೇರಿದಂತೆ ಒಟ್ಟು ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.



