ವಿಜಯಸಾಕ್ಷಿ ಸುದ್ದಿ, ರೋಣ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಜೂನ್ 2ರಂದು ರಾಜೀವಗಾಂಧಿ ಶಿಕ್ಷಣ ಸಂಸ್ಥೆಯಲ್ಲಿ `ಮುಂದೇನು…’ ಎಂಬುದರ ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಶಾಸಕ ಜಿ.ಎಸ್. ಪಾಟೀಲ ಕಾರ್ಯಾಗಾರಕ್ಕೆ ಆಗಮಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅವರು ಬುಧವಾರ ರೋಣ ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಾಸಾದ ತಕ್ಷಣ ಅನೇಕ ವಿಷಯ ಕುರಿತು ಗೊಂದಲದಲ್ಲಿ ಬೀಳುತ್ತಾರೆ. ಹಿಗಾಗಬಾರದು ಎಂಬ ದೃಷ್ಟಿಯಿಂದ ಯಾವ ವಿದ್ಯಾರ್ಥಿ ಯಾವ ರೀತಿಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ತಿಳಿಸುವುದೇ ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಹಿಂದೆ ಸಂಸ್ಥೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಎರಡು ತಿಂಗಳ ಕಾಲ ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬುದರ ಕುರಿತು ಉಚಿತ ತರಬೇತಿಯನ್ನು ನೀಡಲಾಗಿತ್ತು. ಇದರ ಲಾಭವನ್ನು ನೂರಾರು ವಿದ್ಯಾರ್ಥಿಗಳು ಪಡೆದುಕೊಂಡಿದ್ದು ನಮಗೆ ಸಂತಸ ತಂದಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದೇನು ಎಂಬ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಭಾಗಿಯಾಗಬೇಕು. ಈ ಕಾರ್ಯಾಗಾರಕ್ಕೆ ಧಾರವಾಡ ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು, ನುರಿತ ತರಬೇತಿದಾರರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಐ.ಎಸ್. ಪಾಟೀಲ, ಸಂಗನಗೌಡ ಪಾಟೀಲ, ಅಕ್ಷಯ ಪಾಟೀಲ, ಮುತ್ತಣ್ಣ ಸಂಗಳದ, ಯೂಸುಪ್ ಇಟಗಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.