ಕಾರ್ಯಾಗಾರದಿಂದ ಬೌದ್ಧಿಕ ಭಾಷಾಜ್ಞಾನ ಹೆಚ್ಚಳ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಾರ್ಯಾಗಾರದಿಂದ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಭಾಷಾಜ್ಞಾನ ಹೆಚ್ಚುತ್ತದೆ. ಭಾಷೆ ನದಿಯಂತೆ, ಹೊಸ ವಿಚಾರಗಳು ಸೇರ್ಪಡೆಗೊಳ್ಳುತ್ತಲೇ ಇರುತ್ತವೆ. ನಾವು ಕೂಡ ಹೊಸ ಮಾರ್ಗಗಳನ್ನು ಅನುಸರಿಸಲು ಕಾರ್ಯಾಗಾರ ಸಹಕಾರಿಯಾಗಿದೆ ಎಂದು ಧಾರವಾಡ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ ಹೇಳಿದರು.

Advertisement

ಗದಗ ಜಿಲ್ಲೆಯ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಮತ್ತು ಇಂಗ್ಲಿಷ್ ವಿಷಯದ ರಾಜ್ಯಮಟ್ಟದ ಕಾರ್ಯಾಗಾರದ ವಿಷಯ ಮಂಡನೆ, ಕನ್ನಡ ವಿಭಾಗದಿಂದ ಚಂಪು ಸಾಹಿತ್ಯ ಕಾವ್ಯಗಳ ಓದು ಮತ್ತು ವಿಶ್ಲೇಷಣೆ, ಇಂಗ್ಲಿಷ್ ವಿಭಾಗದಿಂದ ನವೋದಯ ಸಾಹಿತ್ಯದ ಮೇಲೆ ಇಂಗ್ಲಿಷ್ ಸಾಹಿತ್ಯದ ಪ್ರಭಾವ ಈ ವಿಷಯಗಳ ಕಾರ್ಯಗಾರದ ಉದ್ಘಾಟಿಸಿ ಅವರು ಮಾತನಾಡಿದರು.

ಸಿಡಿಸಿ ಅಧ್ಯಕ್ಷ ವಿದ್ಯಾದರ ದೊಡ್ಡಮನಿ ಮಾತನಾಡಿ, ಹೊಸ ಹೊಸ ಬದಲಾವಣೆಗೆ ಒಳಪಡುವಾಗ, ಹೊಸ ಚಿಂತನೆಗಳು ಉದಯಿಸುವಾಗ ಕಾರ್ಯಾಗಾರಗಳು ಅವಶ್ಯ. ಇದರ ಸಂಪೂರ್ಣ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಹೇಳಿದರು.

ಡಾ. ಶಿವಪ್ಪ ಕುರಿ ಮಾತನಾಡಿ, ಇಂಪು-ಕಂಪು-ಸೊಂಪು ಇರುವುದು ಹಳಗನ್ನಡದಲ್ಲಿ. ಭಾಷಾ ಸೊಗಡನ್ನು ಅರ್ಥಮಾಡಿಕೊಳ್ಳಬೇಕೆಂದರೆ ಹಳಗನ್ನಡವನ್ನು ಅರ್ಥವನ್ನು ಮಾಡಿಕೊಂಡು ಕನ್ನಡದ ರಥೋತ್ಸವ ನಿರಂತರವಾಗಿಸಲು ವಿದ್ಯಾರ್ಥಿಗಳು ಪಣತೋಡಬೇಕು ಎಂದು ಕರೆ ನೀಡಿದರು.

ಪ್ರಾಚಾರ್ಯ ಎಮ್.ಯು. ಹಿರೇಮಠ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವ ಉತ್ತಮವಾಗಿ ಬೆಳೆದು ನಿಲ್ಲಬೇಕಾದರೆ ಸಾಹಿತ್ಯದ ಕೌಶಲ್ಯ ಅರಿತುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಡಾ.ಸುಧಾ ಕೌಜಗೇರಿ ಮಾತನಾಡಿ, ಹಳೆಯದನ್ನು ಬುನಾದಿಯನ್ನಾಗಿಸಿಕೊಂಡು ಕನ್ನಡವನ್ನು ಅಧ್ಯಯನ ಮಾಡಬೇಕು. ಎಲ್ಲವನ್ನೂ ಜೀರ್ಣಿಸಿ ಅರಗಿಸಿಕೊಳ್ಳುವ ಶಕ್ತಿ ಕನ್ನಡ ಸಾಹಿತ್ಯದಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರು.

ಪ್ರೊ. ಎಸ್.ಯು. ಸಜ್ಜನಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ಯಾಜೆಟೆಡ್ ಮ್ಯಾನೇಜರ್ ಬಿ.ಎಫ್. ಕರಬುಡ್ಡಿ, ಪ್ರೊ. ಪ್ರಕಾಶ ಕರಿಗಾರ, ಪ್ರೊ. ಸತ್ತಾರ ಬಡೆಖಾನ, ಪ್ರೊ. ಎಸ್.ಯು. ಸಜ್ಜನಶೆಟ್ಟರ, ಡಾ. ಎಸ್.ಕೆ. ಪೂಜಾರ, ಪ್ರೊ. ಮಹಾಲಕ್ಷ್ಮೀ ಹುಟಗಿ, ಪ್ರೊ. ರೂಪಾ ಶ್ರೀನಿವಾಸ, ಪ್ರೊ. ಮಹಬೂಬ ಆರೀಫ ಸದರಸೋಪವಾಲೆ, ಡಾ. ಸುಜಾತಾ ಬರದೂರ, ಪ್ರೊ. ಸತೀಶ ಸರ್ವಿ, ಪ್ರೊ. ದ್ಯಾಮಣ್ಣ ಮನಿಕಟ್ಟಿ, ಪ್ರೊ. ರಿಯಾಜಅಹ್ಮದ ದೊಡ್ಡಮನಿ, ಪ್ರೊ. ಪ್ರತಿಭಾ ಚವ್ಹಾಣ, ಪ್ರೊ. ಸುಮಿತ್ರಾ ಮೇದಾರ, ಪ್ರೊ. ವಹಿದಾ ಕಿಲ್ಲೆದಾರ, ಲಕ್ಷ್ಮೀ ನಾಗರಾಳ, ಶ್ರೀದೇವಿ ಸೇರಿದಂತೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇದ್ದರು.

ಸಿರ್ಸಿ ಕಾಲೇಜಿನ ಪ್ರೊ. ವಿಜಯಲಕ್ಷ್ಮೀ ದಾನರಡ್ಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ಭಯ ಇದೆ. ಅದನ್ನು ಉಪನ್ಯಾಸಕರು ಹೋಗಲಾಡಿಸಬೇಕಾದರೆ ಪಾಠದ ಸಾರಾಂಶವನ್ನು ಕಥೆಯ ರೂಪದಲ್ಲಿ, ಇಲ್ಲವೇ ನಾಟಕದ ರೂಪದಲ್ಲಿ ಹೇಳಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಭಾಷೆ ಬಗ್ಗೆ ಇರುವ ಭಯ ದೂರವಾಗುತ್ತದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here