ಬರೋಬ್ಬರಿ ಎಂಟು ವರ್ಷಗಳ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತೊಮ್ಮೆ ವಿಶ್ವಕಪ್ ಫೈನಲ್‌ಗೆ ತಲುಪುವ ಸಾಧನೆ ಮಾಡಿದೆ.
2017ರಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡ ನಂತರ, ಈ ಬಾರಿ ತಮ್ಮ ಅಭಿಮಾನಿಗಳ ಎದುರು ತವರು ನೆಲದಲ್ಲಿ ವಿಶ್ವಕಪ್ ಟ್ರೋಫಿ ಎತ್ತುವ ಅಪೂರ್ವ ಅವಕಾಶ ತಂಡದ ಮುಂದೆ ಬಂದಿದೆ. ನವೆಂಬರ್ 2ರ ಭಾನುವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪ್ರಶಸ್ತಿ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಲೀಗ್ ಹಂತದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಸೋಲು ಕಂಡಿದ್ದರೂ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಶಕ್ತಿಯುತ ಹಿಂತಿರುಗಿದೆ. ವಿಶೇಷವಾಗಿ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಯ ರನ್ ಚೇಸ್ ಮಾಡಿ ಪ್ರೇಕ್ಷಕರ ಮನ ಗೆದ್ದಿತ್ತು. ಅದೇ ಮೈದಾನದಲ್ಲಿ ಈಗ ಅಂತಿಮ ಪೈಪೋಟಿ ನಡೆಯಲಿದ್ದು, ಆಟಗಾರ್ತಿಯರು ಆತ್ಮವಿಶ್ವಾಸದಿಂದ ತುಂಬಿದ್ದಾರೆ.
ಆದರೆ, ಈ ಉತ್ಸಾಹದ ಮಧ್ಯೆ ಮಳೆ ಅಡ್ಡಿಯ ಆತಂಕವೂ ಎದುರಾಗಿದೆ. ಹವಾಮಾನ ಇಲಾಖೆಯ ವರದಿ ಪ್ರಕಾರ, ನವೆಂಬರ್ 2ರಂದು ನವಿ ಮುಂಬೈ ಪ್ರದೇಶದಲ್ಲಿ ಬೆಳಿಗ್ಗೆ 4 ರಿಂದ 7 ಗಂಟೆಯವರೆಗೆ ಹಾಗೂ ಸಂಜೆ 5 ರಿಂದ 7 ಗಂಟೆಯವರೆಗೆ ಹಗುರ ಮಳೆ ಬೀಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮಳೆ ತೀವ್ರವಾದರೆ ಪಂದ್ಯ ಆರಂಭ ವಿಳಂಬವಾಗಬಹುದು ಅಥವಾ ಓವರ್‌ಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆದರೆ, ರಾತ್ರಿಯಿಡೀ ಮಳೆ ಬೀಳುವ ಸೂಚನೆ ಇಲ್ಲದಿರುವುದು ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ನೀಡುವ ವಿಚಾರವಾಗಿದೆ.
ಹವಾಮಾನ ಅನುಕೂಲವಾಗದಿದ್ದರೆ, ಐಸಿಸಿ ನವೆಂಬರ್ 3ನೇ ತಾರೀಖು ಮೀಸಲು ದಿನವನ್ನಾಗಿ ಘೋಷಿಸಿದೆ. ಭಾನುವಾರ ಪಂದ್ಯ ಪೂರ್ಣಗೊಳ್ಳದಿದ್ದರೆ, ಸೋಮವಾರ ಅದನ್ನು ಮುಗಿಸಲು ಅವಕಾಶ ನೀಡಲಾಗುತ್ತದೆ. ಆದರೆ ಈ ಎರಡು ದಿನಗಳಲ್ಲಿ ಕೂಡ ಪಂದ್ಯ ನಡೆಯದಿದ್ದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.
ಭಾರತೀಯ ಅಭಿಮಾನಿಗಳು ಈ ಪಂದ್ಯಕ್ಕಾಗಿ ಉಸಿರುಗಟ್ಟಿದ್ದಾರೆ. 2017ರಲ್ಲಿ ಕೈತಪ್ಪಿದ ಟ್ರೋಫಿ ಈ ಬಾರಿ ತವರು ನೆಲದಲ್ಲೇ ಗೆಲ್ಲುವ ನಿರೀಕ್ಷೆಯಲ್ಲಿ ಹಾರೈಸುತ್ತಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂದಾನ ನೇತೃತ್ವದ ಯುವ ತಂಡ ವಿಶ್ವದ ಮುಂದೆ ತನ್ನ ಶಕ್ತಿ ಪ್ರದರ್ಶಿಸಲು ಸಿದ್ಧವಾಗಿದೆ.


