ವಿಜಯಸಾಕ್ಷಿ ಸುದ್ದಿ, ಗದಗ : ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಎಸ್.ಬಿ.ಐ-ಎ.ಎಸ್.ಎಫ್ ಆರ್‌ಸೆಟಿ ನಿರ್ದೇಶಕ ಪಿ.ಕೆ.ಹೊಸಮನಿ ಮಾತನಾಡಿ, ಸಾಲು ಮರದ ತಿಮಕ್ಕನನ್ನು ಮಾದರಿಯಾಗಿ ಇಟ್ಟುಕೊಂಡು ಎಲ್ಲರೂ ಸಸಿಯನ್ನು ನೆಟ್ಟು ಮಕ್ಕಳಂತೆ ಕಾಪಾಡಬೇಕು. ತನ್ಮೂಲಕ ನಮಗೆ ಶುದ್ಧವಾದ ಗಾಳಿ, ಮಳೆ ನೀರು ಸಿಗುತ್ತದೆ ಎಂದರು.
ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾಲರ ಮಾತನಾಡಿ, ನೈಸರ್ಗಿಕ ಸಂಪತ್ತನ್ನು ಬೆಳಸುವುದು ಹಾಗೂ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು. ಇಂತದೇ ಪರಿಸ್ಥಿತಿ ಮುಂದುವರೆದರೆ ನಾವು ಉಸಿರಾಡುವ ಗಾಳಿಯನ್ನೂ ಕೂಡಾ ನಾವು ಬಾಟಲಿಯಲ್ಲಿ ತುಂಬಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸೋಣ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ಮಂಕಣಿ ಮಾತನಾಡಿ, ಏರುತ್ತಿರುವ ತಾಪಮಾನ, ಹವಾಮಾನ ವೈಪರಿತ್ಯ, ಮಳೆಯ ಕೊರತೆಯನ್ನು ನೀಗಿಸಲು ನಾವೆಲ್ಲರೂ ಗಿಡಗಳನ್ನು ನೆಡೋಣ ಎಂದರು.
ಹೇಮಾವತಿ ಹಿರೇಗೌಡರ ವಿಶ್ವ ಪರಿಸರ ದಿನಾಚರಣೆ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎನ್.ಎಚ್. ಭಂಡಿ ಸ್ವಾಗತಿಸಿದರು. ಡಾ.ವಿನಾಯಕ ನಿರಂಜನ ಕಾರ್ಯಕ್ರಮ ನಿರೂಪಿಸಿದರು.