ಲಕ್ಮೇಶ್ವರ ತಾಲೂಕಾ ಕಸಾಪ ವತಿಯಿಂದ ವಿಶ್ವಮಾನವ ದಿನಾಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ರಾಷ್ಟ್ರಕವಿ ಕುವೆಂಪುರವರು ಸಾಹಿತ್ಯದ ಮೂಲಕ ಮಾನವನನ್ನು ವಿಶ್ವ ಮಾನವನ್ನಾಗಿಸುವ ಕನ್ನಡದ ಶ್ರೇಷ್ಠ ಚಿಂತನೆಗಳಿಗೆ ಜಾಗತಿಕ ಸ್ಥಾನಮಾನ ಒದಗಿಸಿ ಕನ್ನಡತನವನ್ನು ಆಗಸದೆತ್ತರಕ್ಕೆ ಏರಿಸಿದವರು ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಹೇಳಿದರು.

Advertisement

ಅವರು ಲಕ್ಮೇಶ್ವರ ತಾಲೂಕಾ ಕಸಾಪ ವತಿಯಿಂದ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಜಗದ-ಯಗದ ಕವಿ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮೇರು ಶಿಖರವಾಗಿದ್ದಾರೆ. ಅವರು ನವೋದಯ ಸಾಹಿತ್ಯದ ಸಾಮಾಜಿಕ, ಸಾಂಸ್ಕೃತಿಕ, ಪ್ರಾಕೃತಿಕ ಮತ್ತು ವೈಚಾರಿಕ ಸಮಾಜದ ಎಲ್ಲ ರಂಗದ ವಿಮರ್ಶೆ ಮೂಲಕ ಸಮಾಜವನ್ನು ಜಾಗೃತವಾಗಿರುವ ಕಾರ್ಯ ಮಾಡಿದ್ದಾರೆ. ಕುವೆಂವು ಅವರು ಸಮಾಜಕ್ಕೆ ನೀಡಿದ ಚಿಂತನೆ, ಆದರ್ಶ, ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜಾತಿ-ಬೇಧ ಮರೆತು ಸ್ನೇಹ, ಸೌಹಾರ್ದತೆ, ಭ್ರಾತೃತ್ವದಿಂದ ಬಾಳೋಣ. ಅಂದಾಗ ಮಾತ್ರ ಮನುಜ ಮತ-ವಿಶ್ವಪಥದ ಅವರ ಚಿಂತನೆ ಮತ್ತು ವಿಶ್ವಮಾನವ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದರು.

ಸರಕಾರಿ ಪ್ರೌಢಶಾಲೆ ಯಲ್ಲಾಪುರದ ಶಿಕ್ಷಕ ಎಂ.ಎಚ್. ದಿಂಡವಾಡ ಮಾತನಾಡಿ, ಕುವೆಂಪುರವರಿಲ್ಲದ ಕನ್ನಡವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಸಮಾಜ ಕಲ್ಯಾಣ ಇಲಾಖೆಯ ಎಚ್.ಎಂ. ಅರಳಿಹಳ್ಳಿ ಮಾತನಾಡಿದರು. ಸಾಹಿತ್ಯ ಪರಿಷತ್ತಿನ ಸಲಹಾ ಸಮಿತಿಯ ಹಿರಿಯರಾದ ಎಸ್.ಐ. ಆಲೂರ ಅಧ್ಯಕ್ಷೀಯ ನುಡಿಗಳನ್ನು ಆಡಿದರು.

ಕಾರ್ಯಕಾರಿ ಸಮಿತಿಯ ಸದಸ್ಯ ಹೆಚ್.ಎಂ. ಗುತ್ತಲ ಸ್ವಾಗತಿಸಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು. ಸಲಹಾ ಸಮಿತಿಯ ಹಿರಿಯ ಸದಸ್ಯ ಎಸ್.ಬಿ. ಅಣ್ಣಿಗೇರಿ ವಂದಿಸಿದರು. ಅತಿಥಿಗಳು ಗಣ್ಯರು ಹಾಗೂ ವಿದ್ಯಾರ್ಥಿಗಳೆಲ್ಲರೂ ಸೇರಿ ನಾಡಗೀತೆಯನ್ನು ಹಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಿದ್ದಣ್ಣ ಕಳಸಣ್ಣವರ ಹಾಗೂ ಪದವಿಪೂರ್ವ, ಪದವಿ ಕಾಲೇಜಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಮೂಹ ಸಂಪನ್ಮೂಲ ವ್ಯಕ್ತಿ ಉಮೇಶ ನೇಕಾರ ಮಾತನಾಡಿ, ವಿಶ್ವದ ಏಳಿಗೆಗೆ ವಿಶ್ವಮಾನವತೆಯ ಸಂದೇಶವೊಂದೇ ಪರಿಹಾರ. ಅಂತಹ ವಿಶ್ವಮಾನವತೆ ಸಂದೇಶ ಸಾರಿದ ಕುವೆಂಪು ನಮ್ಮ ಕನ್ನಡದ ಅಸ್ಮಿತೆಯಾಗಿದ್ದಾರೆ. ಕುವೆಂಪು ಕನ್ನಡದ ಶ್ರೇಷ್ಠ ಚಿಂತನೆಗಳಿಗೆ ಜಾಗತಿಕ ಸ್ಥಾನಮಾನ ಒದಗಿಸಿದವರು. ಕನ್ನಡತನವನ್ನು ಆಗಸದೆತ್ತರಕ್ಕೆ ಏರಿಸಿದವರು. ವಿಶೇಷವಾಗಿ ಸಮ-ಸಮಾಜದ ಇಂದಿನ ಅವಶ್ಯಕತೆಯನ್ನು ಸಾರಿ ಹೇಳಿದವರು. ಅವರ ಜನ್ಮ ಜಯಂತಿ ನಮ್ಮೆಲ್ಲರ ಜಾಗೃತಿ ಎಂದರು.


Spread the love

LEAVE A REPLY

Please enter your comment!
Please enter your name here