ವಿಜಯಸಾಕ್ಷಿ ಸುದ್ದಿ, ಗದಗ : ಯಾವುದೇ ಕಾರ್ಯ ಚಟುವಟಿಕೆಗಳು ಜರುಗಲು ಮೂಲಭೂತವಾಗಿ ಮಾನವನ ಮನಸ್ಸೇ ಕಾರಣ. ಮನಸ್ಸಿದ್ದರೆ ಮಾರ್ಗ ಎಂದು ಹಿರಿಯರು ಹೇಳಿದ್ದಾರೆ. ಇಂದು ಅನಾರೋಗ್ಯ ಮನಸ್ಸುಳ್ಳವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಸ್ವಸ್ಥ ಮನಸ್ಸು ಇಲ್ಲದವರು ಅನೇಕ ಅಹಿತ ಕಾರ್ಯಗಳಲ್ಲಿ ತೊಡಗುತ್ತಾರೆ. ಮಹತ್ವದ ಗುರಿ ಸಾಧನೆಗಳ ಬಗ್ಗೆ ಅವರ ಗಮನ ಇರುವುದಿಲ್ಲ.
ನಮ್ಮೆಲ್ಲರ ಮನಸ್ಸು ಸ್ವಸ್ಥವಾಗಿದ್ದರೆ ಸಾತ್ವಿಕ ಪರಿಸರ ನಿರ್ಮಾಣವಾಗುವುದು ಮತ್ತು ನಮ್ಮ ಗುರಿ-ಸಾಧನೆಗಳು ಸುಗಮಗೊಳ್ಳುವವು. ಹೀಗಾಗಿ, ಮಾನಸಿಕ ಆರೋಗ್ಯದಿಂದ ಸರ್ವ ಸಾಧನೆ ಸಾಧ್ಯ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಅಭಿಪ್ರಾಯಪಟ್ಟರು.
ಇಲ್ಲಿನ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಗದಗ ಇವರು ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಯೋಗ ಸಾಧಕರು ಸೇರಿ ಹಮ್ಮಿಕೊಂಡಿದ್ದ `ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಪ್ರತಿನಿತ್ಯ ಯೋಗ ಸಾಧನೆ, ಉತ್ತಮ ಗ್ರಂಥಗಳ ಅಧ್ಯಯನ, ಉಪನ್ಯಾಸ ಕೇಳುವ ಹವ್ಯಾಸಗಳನ್ನು ಬೆಳೆಸಿಕೊಂಡರೆ ಮಾನಸಿಕ ಆರೋಗ್ಯ ಪಡೆಯಲು ಸಮರ್ಥರಾಗುತ್ತೇವೆ ಎಂದರು.
ಉಪನ್ಯಾಸಕರು ಮತ್ತು ಯೋಗ ಸಾಧಕರಾದ ಡಾ. ಎಂ.ವಿ. ಐಹೊಳ್ಳಿ ಮಾತನಾಡಿ, ನಾವು ನಮ್ಮ ನಿತ್ಯದ ಜೀವನ ಶೈಲಿಯನ್ನು ಸುಧಾರಿಸಿಕೊಳ್ಳಬೇಕು. ಸಾಧ್ಯವಾದಷ್ಟು ದೈಹಿಕ ಶ್ರಮವಹಿಸಬೇಕು. ಪ್ರಮಾಣಬದ್ಧವಾಗಿ ಉತ್ತಮ ಆಹಾರ ಸೇವಿಸಬೇಕು, ಯಾವಾಗಲೂ ಧನಾತ್ಮಕ ವಿಚಾರ ಹೊಂದಿರಬೇಕು. ಆರೋಗ್ಯವಂತರಾಗಿರಲು ಪ್ರಯತ್ನಿಸಬೇಕೆಂದು ಸೂಚಿಸಿದರು.
ಶೋಭಾ ಮುಳಗುಂದ, ವಿಜಯಾ ಚನ್ನಶೆಟ್ಟಿ, ಸುಲೋಚನಾ ಐಹೊಳ್ಳಿ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದರು. ಅರುಣಾ ಇಂಗಳಳ್ಳಿ ಪ್ರಾರ್ಥಿಸಿದರು. ಬವಸಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಸ್ವಾಗತ ಕೋರಿ, ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಆಶಾ ಚಳಗೇರಿ ವಂದಿಸಿದರು.