ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಬಸ್‌ನಿಲ್ದಾಣದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಸ್ಥಳೀಯ ಈಶ್ವರೀಯ ವಿಶ್ವವಿದ್ಯಾಲಯದವರು ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಮಾತನಾಡಿ, ತಂಬಾಕು ಕ್ಯಾನ್ಸರ್ ರೋಗಕ್ಕೆ ದಾರಿ ಮಾಡುತ್ತದೆ. ತಂಬಾಕಿನ ಉತ್ಪನ್ನಗಳು ಬಹಳಷ್ಟು ಅಪಾಯಕಾರಿಯಾಗಿದ್ದು, ಜನತೆ ಅವುಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಸೇವಿಸುವಾಗ ಮೊದಮೊದಲು ಬಹಳಷ್ಟು ಮಜವೆನ್ನಿಸುತ್ತದೆ. ಆದರೆ ದಿನಗಳೆದಂತೆ ಅದು ನಿಮ್ಮನ್ನೇ ನುಂಗಿ ಹಾಕುವ ಮಟ್ಟಕ್ಕೆ ಬೆಳೆಯುತ್ತದೆ. ಆದ್ದರಿಂದ ತಂಬಾಕಿನಿಂದ ದೂರವಿರಿ ಎಂದರು.
ಸಂಚಾಲಕಿ ಬಿ.ಕೆ. ಸವಿತಕ್ಕ ಮಾತನಾಡಿ, ದುಶ್ಚಟಗಳು ಮೊದಲಿಗೆ ಸೇವನೆಗೆ ನಿಮ್ಮನ್ನು ಪ್ರೇರೇಪಿಸುತ್ತವೆ. ಅವುಗಳ ಮೂಲ ಮಂತ್ರ ಏನೆಂದರೆ ಮೊದಲು ನೀನು ನನ್ನನ್ನು ತೆಗದುಕೊ, ನಂತರ ನಿಧಾನವಾಗಿ ನಾನು ನಿನ್ನನ್ನು ತೆಗೆದುಕೊಂಡು ನಿನ್ನನ್ನು ಮಣ್ಣಲ್ಲಿ ಮಣ್ಣಾಗಿಸುತ್ತೇನೆ ಎನ್ನುತ್ತದೆ. ಆದ್ದರಿಂದ ತಂಬಾಕು ಸೇವನೆ ಅಪಾಯಕಾರಿಯಾಗಿದ್ದು, ಅವುಗಳ ಸೇವೆನಯಿಂದ ದೂರವಿರಬೇಕೆಂದು ಹೇಳಿದರು.
ತಂಬಾಕು ಸೇವನೆಯಿಂದಾಗುವ ಹಾನಿಯ ಬಗ್ಗೆ ಅವರು ವಿವಿಧ ಚಾರ್ಟ್ಗಳನ್ನು ಪ್ರದರ್ಶಿಸುವ ಮೂಲಕ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ನಿಲ್ದಾಣದ ಸಾರಿಗೆ ನಿಯಂತ್ರಕ ಬಿ.ಎಸ್. ನಾಯಕರ, ಸಿದ್ದಣ್ಣ ಚವರಿ, ಡಾ. ಎಲ್.ಆರ್. ರಡ್ಡೇರ, ಆರೋಗ್ಯ ಇಲಾಖೆಯ ಸಂಗೀತಾ ಗುಮ್ಮಗೋಳಮಠ, ಎಲ್.ಸಿ. ಹೊಸಮನಿ, ನಾಡಗೌಡ ಮತ್ತಿತರರು ಇದ್ದರು.