ವಿಜಯಸಾಕ್ಷಿ ಸುದ್ದಿ, ಡಂಬಳ : ತಂಬಾಕು ಸೇವನೆ ಮನುಷ್ಯನ ಮೇಲೆ ಉಂಟುಮಾಡುವ ದುಷ್ಟರಿಣಾಮಗಳನ್ನು ಯುವ ಸಮುದಾಯಕ್ಕೆ ಮನ ಮುಟ್ಟುವಂತೆ ಜಾಗೃತಿಯೊಂದಿಗೆ ತಿಳಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಮುಖಂಡರಾದ ಜಿ.ಎಸ್. ಕೊರ್ಲಹಳ್ಳಿ ಹೇಳಿದರು.
ಡಂಬಳ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸಮಿತಿ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಯುವಕರು ಅತಿ ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ಯುವ ಪೀಳಿಗೆಯನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಅವರಿಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಎ.ಕೆ. ಮುಲ್ಲಾನವರ, ನಾಗೇಶ ಹುಬ್ಬಳ್ಳಿ ಮಾತನಾಡಿ, ತಂಬಾಕು ಸೇವನೆಯಿಂದ ಮುಕ್ತರಾಗಲು ಪಣ ತೋಡಬೇಕು ಮತ್ತು ತಮ್ಮ ಅಭಿವೃದ್ಧಿಗೆ ಪೂರಕವಾಗಿ ಸಮೃದ್ಧ ಜೀವನ ನಡೆಸಬೇಕು ಎಂದು ಹೇಳಿದರು.
ಸಮಾಜಸೇವಕ ಭೀಮಪ್ಪ ಗದಗಿನ ಮಾತನಾಡಿ, ಒತ್ತಡ ಕಡಿಮೆ ಮಾಡಲು ಧೂಮಪಾನ ಸಹಕಾರಿ, ಧೂಮಪಾನವು ಸಂತೋಷ ಹೆಚ್ಚಿಸುತ್ತದೆ, ಧೈರ್ಯ ತುಂಬುತ್ತದೆ ಎಂಬೆಲ್ಲ ಹುಸಿ ಕಲ್ಪನೆಗಳು ಜನರಲ್ಲಿ ಮೂಡಿರುವುದು ಖೇದಕರ. ಬೀಡಿ-ಸಿಗರೇಟು, ಗುಟ್ಕಾ, ಸಾರಾಯಿಯಂತಹ ಉತ್ಪನ್ನಗಳಲ್ಲಿ 100ರಷ್ಟು ವಿಷಕಾರಿ ಹಾಗೂ 70ರಷ್ಟು ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಶ್ವಾಸಕೋಶದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ ಹೀಗೆ ಹಲವಾರು ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಇದರಿಂದ ಮದ್ಯವ್ಯಸನಿಗಳು ಹೋರಬರುವುದರ ಮೂಲಕ ಉತ್ತಮ ಬದುಕನ್ನು ನಿರ್ಮಿಸಿಕೊಳ್ಳಲು ಮುಂದಾಗಿ ಎಂದರು.
ಕಾರ್ಯಕ್ರಮದಲ್ಲಿ ಸಿಎಸ್‌ಸಿ ನೋಡಲ್ ಅಧಿಕಾರಿ ಕಿರಣ, ಮುಂಡರಗಿಯ ಸಂಯೋಜನಾಧಿಕಾರಿ ವಿಶಾಲಾ ಮಲ್ಲಾಪುರ, ಡಂಬಳ ಗ್ರಾಮದ ಧರ್ಮಸ್ಥಳದ ಮೇಲ್ವಿಚಾರಕ ಅಣ್ಣಪ್ಪ, ಸೇವಾಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು, ಮಹಿಳಾ ಸಂಘದ ಸದಸ್ಯರು ಇದ್ದರು.