ವಿಜಯಸಾಕ್ಷಿ ಸುದ್ದಿ, ಗದಗ : ಜನರ ನೋವು ನಿವಾರಿಸುವವರ ಕಣ್ಣೀರು ಒರೆಸಿ ಆತ್ಮಸ್ಥೈರ್ಯ ತುಂಬುವ ಕಾಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಔಷಧ ತಜ್ಞರ ಸೇವೆ ಅನುಪಮವಾದದ್ದು ಎಂದು ಮಣಕವಾಡದ ಪೂಜ್ಯ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಅವರು ಬುಧವಾರ ಗದುಗಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ಗದಗ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಏರ್ಪಡಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ, ಹಿರಿಯ ಔಷಧ ತಜ್ಞರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ, ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆರೋಗ್ಯದಲ್ಲಿ ತೊಂದರೆಯಾಗಿ ನೋವಿನಿಂದ ಬಳಲುವವರಿಗೆ ಔಷಧ ಕೊಟ್ಟು ಹಗಲಿರುಳು ಸೇವೆ ಮಾಡುತ್ತಿರುವ ಔಷಧ ವ್ಯಾಪಾರಸ್ಥರ ಸೇವೆ ಅನುಪಮವಾದದ್ದು. ಬದಲಾದ ಜೀವನ ಶೈಲಿ, ಬದಲಾದ ಸನ್ನಿವೇಶದಿಂದಾಗಿ ಮನುಷ್ಯ ಸಹಜವಾಗಿ ಹಲವಾರು ರೋಗಳಿಗೆ ಬಲಿಯಾಗುತ್ತಿದ್ದಾನೆ. ಈ ಹಿಂದೆ ಮನೆಯಲ್ಲಿ ಮಸಾಲೆ ತುಂಬಿದ ಡಬ್ಬಿಗಳಿರುತ್ತಿದ್ದವು. ಆ ಜಾಗೆಯಲ್ಲಿ ಈಗ ಮಾತ್ರೆ ಡಬ್ಬಿಗಳು ಬಂದಿವೆ. ಮಾತೃ ಭಕ್ತಿ ಕಡಿಮೆಯಾಗಿ ಮಾತ್ರೆ ಭಕ್ತಿ ಹೆಚ್ಚುತ್ತಿದೆ ಎಂದರು.
ತುರ್ತು ಸಂದರ್ಭದಲ್ಲಿ ಔಷಧ ತಜ್ಞರು ಕೊಟ್ಟ ಔಷಧಗಳಿಂದ ಆರಾಮ ಆಗಿರುವ ಸಂದರ್ಭಗಳಿವೆ. ಜೀವನ್ಮರಣಗಳ ಮಧ್ಯ ತೊಳಲಾಡುತ್ತಿರುವವರ ಜೀವ ರಕ್ಷಣೆಗೆ ಸಣ್ಣ ಪ್ರಯತ್ನದ ಕಾರ್ಯವನ್ನು ದೇವರು ನಿಮಗೆ ಕೊಟ್ಟಿದ್ದಾನೆ. ನಿಷ್ಠೆ-ಪ್ರಾಮಾಣಿಕತೆಯಿಂದ ಜೊತೆಗೆ ಮಾನವೀಯತೆಯಿಂದ ಮಾಡಿ ಸಂತೃಪ್ತಿಪಟ್ಟುಕೊಳ್ಳಿ ಎಂದರು.
ದೇಹದಾನ, ನೇತ್ರದಾನ ಮಾಡುವ ಮೂಲಕ ಇನ್ನೊಬ್ಬರ ಬದುಕಿಗೆ ಚೈತನ್ಯ ತುಂಬಿ. ದೇವರಿಗೆ ಬೆಳ್ಳಿಯ ಕಣ್ಣುಬೊಟ್ಟು ಕೊಡುವ ಬದಲು ಮರಣದ ನಂತರ ದೇಹದಾನ, ನೇತ್ರದಾನದ ಸಂಕಲ್ಪ ಮಾಡಿ. ಸತ್ತಾಗ ಹೆಗಲು ಕೊಡುವದು ಮುಖ್ಯವಲ್ಲ, ಬಿದ್ದಾಗ ಬೆನ್ನು ಚಪ್ಪರಿಸಿ ಆತ್ಮವಿಶ್ವಾಸ ತುಂಬುವದು ಮುಖ್ಯ. ನೀವು ಎಕ್ಸಫೈರ್ ಆಗುವ ಮುನ್ನ ನಿಮ್ಮ ಬದುಕು ಇನ್ನೊಬ್ಬರಿಗೆ ಇನ್‌ಸ್ಪೈರ್ ಆಗಲಿ ಎಂದರು.
ಮುಖ್ಯ ಅತಿಥಿ ಕೋಟುಮಚಗಿಯ ಸೋಮೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷ ಆರ್.ವ್ಹಿ. ಕುಲಕರ್ಣಿ ಹಾಗೂ ಮಂಜುನಾಥ ರಡ್ಡಿ ಸಂದರ್ಭೋಚಿತವಾಗಿ ಮತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಗದಗ ತಾಲೂಕಾಧ್ಯಕ್ಷರಾದ ರಾಮನಗೌಡ ದಾನಪ್ಪಗೌಡ್ರ, ಔಷಧ ವ್ಯಾಪಾರಸ್ಥರು ಹಗಲಿರುಳು ಜನರ ಸೇವೆಯಲ್ಲಿ ತೊಡಗಿದವರು. ರೋಗಿಯ ಹಿತ ಆರೋಗ್ಯವನ್ನು ಬಯಸಿ ಮಾನವೀಯತೆಯಿಂದ ಕೆಲಸ ಮಾಡುವವರಾಗಿದ್ದಾರೆ ಎಂದರಲ್ಲದೆ ಔಷಧ ವಿತರಕರ ಭವನ ನಿರ್ಮಿಸುವ ಯೋಜನೆ ಸಂಘಕ್ಕೆ ಇದ್ದು, ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.
ಗದಗ ವೃತ್ತದ ಸಹಾಯಕ ಔಷಧ ನಿಯಂತ್ರಕ ನೀಲಕಂಠ ರಾಠೋಡ, ರಾಜ್ಯ ಜಿಲ್ಲಾ ಪ್ರತಿನಿಧಿ ಎಂ.ಬಿ. ರಮಣಿ ಸೇರಿದಂತೆ ಹಿರಿಯ ಔಷಧ ತಜ್ಞರಾದ ಶಾಮಸುಂದರ ಆನೆಗುಂದಿ, ಮಹಾಬಳೇಶ್ವರಪ್ಪ ಕೋಡಬಳಿ, ಚಂದ್ರಕಾಂತ ಗದಗ, ಗಂಗಾಧರ ಮೆಕ್ಕಿ, ಜನದತ್ತ ಹಿರೇಗೌಡ್ರ, ಮಹೇಶ್ವರ ಮಾಳಗಿ, ಮಹಾದೇವಗೌಡ ಲಿಂಗನಗೌಡ್ರ, ನಾಗರಾಜ ಲಿಂಗಸೂರ ಹಾಗೂ ರಾಜೇಂದ್ರ ನಡವಿ ಅಲ್ಲದೆ ಗದಗ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುರುರಾಜ ಕುಲಕರ್ಣಿ ಪ್ರಾರ್ಥಿಸಿದರು, ಮಹೇಶ ಕುಂದ್ರಾಳಹಿರೇಮಠ ಅವರಿಂದ ಭಕ್ತಿಗೀತೆ ಜರುಗಿತು. ನಾಗೇಶ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮಜಾನ್‌ಸಾಬ ನದಾಫ ನಿರೂಪಿಸಿದರು. ಜ್ಞಾನೇಶ ಖೋಕಲೆ ವಂದಿಸಿದರು. ಗದಗ ಜಿಲ್ಲೆಯ ಎಲ್ಲ ತಾಲೂಕಾ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಔಷಧ ವ್ಯಾಪಾರಸ್ಥರು ಕಾರ್ಯಕ್ರಮದಲ್ಲಿದ್ದರು.
ಅತಿಥಿಯಾಗಿ ಆಗಮಿಸಿದ್ದ ಗದಗ ವೃತ್ತದ ಸಹಾಯಕ ಔಷಧ ನಿಯಂತ್ರಕ ನೀಲಕಂಠ ರಾಠೋಡ ಮಾತನಾಡಿ, ಗುಣಮಟ್ಟದ ಹಾಗೂ ಕಡಿಮೆ ದರದಲ್ಲಿ ಔಷಧ ಉತ್ಪಾದನೆಗೆ ಭಾರತ ಹೆಸರಾಗಿದೆ. ಔಷಧ ವ್ಯಾಪಾರಸ್ಥರ ಕಾರ್ಯ ಸೇವಾಮನೋಭಾವನೆಯಿಂದ ಕೂಡಿದ್ದಾಗಿದೆ. ಹಗಲು ರಾತ್ರಿ ತುರ್ತು ಸಂದರ್ಭದಲ್ಲಿ ಔಷಧ ಪೂರೈಸುವ ಮೂಲಕ ಮಾನವೀಯತೆ ಕಾರ್ಯ ಮಾಡುತ್ತಿದ್ದಾರೆ ಎಂದರು.
Advertisement