ಹಿರಿಯ ನಾಗರಿಕರ ಕೊಡುಗೆಯನ್ನು ಸ್ಮರಿಸಿ : ಎಸ್.ವಿ. ಸಂಕನೂರ

0
World Senior Citizens Day Program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅನುಭವದಲ್ಲಿ ಅಮೃತವಿದೆ ಎನ್ನುವ ಗಾದೆಯ ಮಾತಿನಂತೆ ನಮ್ಮ ಜೀವನ ಪರಿಪಕ್ವವಾಗಲು ಅನುಭವ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಹಿರಿಯರ ಮಾರ್ಗದರ್ಶನ ಅವಶ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾ ನಿರತ ಸ್ವಯಂ ಸೇವಾ ಸಂಸ್ಥೆ ಮತ್ತು ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರು ನಮ್ಮ ದೇಶಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಬೇಕಾಗಿದೆ. ಹಿರಿಯರನ್ನು ಗೌರವ ಮತ್ತು ಭಕ್ತಿಯಿಂದ ಕಾಣುವುದು ನಮ್ಮ ಸಂಪ್ರದಾಯವಾಗಿದೆ. ಜನ್ಮ ಕೊಟ್ಟ ತಂದೆ-ತಾಯಿಗಳ ಪಾಲನೆ, ಪೋಷಣೆ ಮಾಡುವುದು ಮಕ್ಕಳ ಕರ್ತವ್ಯ. ಹಿರಿಯರು ಅನುಭವದ ಬಂಢಾರವಾಗಿದ್ದಾರೆ. ಹಿರಿಯ ನಾಗರಿಕರಿಗೆ ವಯೋಸಹಜವಾಗಿ ಕೆಲವು ಕೆಲವು ದೈಹಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಹಿರಿಯ ನಾಗರಿಕರು ತಮ್ಮ ಶಕ್ತ್ಯಾನುಸಾರವಾಗಿ ಪ್ರತಿನಿತ್ಯ ಯೋಗ ಹಾಗೂ ಸಣ್ಣ ಪುಟ್ಟ ವ್ಯಾಯಾಮ ರೂಢಿಸಿಕೊಳ್ಳಬೇಕು. ಹಿರಿಯ ನಾಗರಿಕರಿಗಾಗಿ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗಿದ್ದು, ಅವುಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ 80ಕ್ಕಿಂತ ಹೆಚ್ಚಿನ ವಯೋಮಿತಿಯ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಲಕ್ಷ್ಮೇಶ್ವರದ ಜಿ.ಎಫ್. ಉಪನಾಳ ಟ್ರಸ್ಟ್ ಶಾಂತಿಧಾಮ ವೃದ್ಧಾಶ್ರಮದ ಅಧ್ಯಕ್ಷ ಪ್ರಕಾಶ ಉಪನಾಳ, ನಿವೃತ್ತ ಸರ್ಕಾರಿ ನೌಕರರ ಕೋ-ಆಪ್ ಕ್ರೆಡಿಟ್ ಸೊಸ್ಶೆಟಿಯ ಅಧ್ಯಕ್ಷ ಬಿ.ಎಂ. ಬಿಳಿಎಲಿ, ಗದಗ ಜಿಲ್ಲಾ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಬಿ.ಎ. ವಸ್ತ್ರದ, ಪ್ರೊಬಸ್ ಕ್ಲಬ್ಸ್ ಅಧ್ಯಕ್ಷ ವಿ.ಎಂ. ಮುಂದಿನಮನಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಿ.ಎ. ಮಾಲಗಿತ್ತಿಮಠ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪಿಂಚಣಿದಾರರ ಸಂಘದ ಅಧ್ಯಕ್ಷ ಎ.ಎನ್. ಬಸ್ತಿ, ಗದಗ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಎಮ್.ಸಿ. ವಗ್ಗಿ, ಬಿ.ಎಸ್. ತೋಟಗೇರ, ಸಾಹಿತಿಗಳಾದ ಐ.ಕೆ. ಕಮ್ಮಾರ, ಅಂದಾನೆಪ್ಪ ವಿಭೂತಿ ಸೇರಿದಂತೆ ಜಿಲ್ಲೆಯಲ್ಲಿ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಸೇವಾ ನಿರತ ಸ್ವಯಂ ಸೇವಾ ಸಂಸ್ಥೆ ಮತ್ತು ಸಂಘಗಳು, ಹಿರಿಯ ನಾಗರಿಕರು ಉಪಸ್ಥತಿತರಿದ್ದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ. ಮಹಾಂತೇಶ ಸರ್ವರನ್ನು ಸ್ವಾಗತಿಸಿದರು. ಮಲ್ಲಪ್ಪ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಗಾಣಿಗೇರ ವಂದಿಸಿದರು.

ಗದಗ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಚ್. ಬೇಲೂರ ಮಾತನಾಡಿ, ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು. ಹಿರಿಯ ನಾಗರಿಕರ ಹುಮ್ಮಸ್ಸು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಪರಿಸ್ಥಿತಿಗೆ ಹೊಂದಿಕೊಂಡು ನಡೆಯಲು ಹಿರಿಯ ನಾಗರಿಕರು ರೂಢಿಸಿಕೊಳ್ಳಬೇಕು. ತಂದೆ ತಾಯಿಗಳ ಸಂರಕ್ಷಣೆ ಮಾಡಬೇಕಾದದ್ದು ಮಕ್ಕಳ ಕರ್ತವ್ಯವಾಗಿದೆ. ಹಿರಿಯ ನಾಗರಿಕರು ಯಾವಾಗಲೂ ವಿಶ್ವಾಸ ಹಾಗೂ ಶ್ರದ್ಧೆ ಕಳೆದುಕೊಳ್ಳಬಾರದು ಎಂದು ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here