ಯುವಕರು ಪರಿಪೂರ್ಣ ವ್ಯಕ್ತಿತ್ವ ನಿರ್ಮಿಸಿಕೊಳ್ಳಿ : ಎಚ್.ಕೆ. ಪಾಟೀಲ

0
World Tourism Day programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಯುವಕರು ದೇಶ ಸುತ್ತಿ ಕೋಶ ಓದಿ. ಅದರಿಂದ ಜ್ಞಾನ ಅನುಭವ ಹೊಂದಿ, ವ್ಯಕ್ತಿತ್ವವನ್ನು ಪಕ್ವಗೊಳಿಸಿಕೊಳ್ಳಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.

Advertisement

ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಎನ್‌ಎಸ್‌ಎಸ್ ಇವರುಗಳ ಸಹಯೋಗದಲ್ಲಿ ಜರುಗಿದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲವು ಜನರ ಆಲೋಚನೆಯಂತೆ ಪ್ರವಾಸೋದ್ಯಮದಿಂದ ಆದಾಯ ಮತ್ತು ಉದ್ಯೋಗ ಸೃಷ್ಟಿ ಆಗುತ್ತದೆ. ಇನ್ನೂ ಕೆಲವರು ಪ್ರವಾಸೋದ್ಯಮ ಅಂದರೆ ಮನರಂಜನೆಯ ಕ್ಷೇತ್ರ ಎಂದು ಹೇಳುತ್ತಾರೆ. ನಿಜವಾಗಿ ನಮ್ಮ ಹಿರಿಯರು ಹೇಳಿದಂತೆ ದೇಶ ಸುತ್ತಿ, ಕೋಶ ಓದಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ ಎಂದು ಹೇಳಿದರು.

ವೀರನಾರಾಯಣ ದೇವಸ್ಥಾನದ ಮೂಲ ಮಂಟಪದರಲ್ಲಿರುವ ಶ್ರೇಷ್ಠ ಶಿಲಾ ಕೃತಿ, ವಾಸ್ತುಶಿಲ್ಪ ಗಮನಿಸಿದಾಗ ಪ್ರೀತಿ-ಗೌರವ ಮೂಡುತ್ತದೆ. ಪ್ರವಾಸೋದ್ಯಮ ನೀತಿಯಲ್ಲಿ ಹೊಸದಾಗಿ ಬದಲಾವಣೆ ಮಾಡಿ ಶಾಲಾ-ಕಾಲೇಜು ಮಕ್ಕಳಿಗೆ ಪ್ರವಾಸ ಮಾಡಲು ಹೆಚ್ಚು ಅವಕಾಶ ಸೃಷ್ಟಿಸಿದಾಗ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯಕವಾಗುತ್ತದೆ. ನಮ್ಮ ಜಿಲ್ಲೆಯಲ್ಲಿರುವ ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕೆಂದು ಕೂಗು ಕೇಳಿಬರುತ್ತಿದ್ದು, ಆದಷ್ಟು ಬೇಗ ಯುನೆಸ್ಕೋ ಪಟ್ಟಿಗೆ ಸೇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

World Tourism Day programme

ಗದುಗಿನ ಕಪ್ಪತ್ತಗುಡ್ಡ ಅತ್ಯಂತ ಶುದ್ಧ ಗಾಳಿ ಹೊಂದಿ, ಹಸಿರಿನಿಂದ ಕೂಡಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಅಂತಹ ಪರಿಸರದಲ್ಲಿ ಸಮಯ ಕಳೆಯುವುದರಿಂದ ಮನಸ್ಸು ಶಾಂತವಾಗುತ್ತದೆ ಎಂದು ನುಡಿದರು.

 

ಶಿರಹಟ್ಟಿಯ ಎಫ್.ಎಂ. ಡಬಾಲಿ ಪಿ.ಯು.ಕಾಲೇಜಿನ ಉಪನ್ಯಾಸಕರಾದ ಸುಧಾ ಹುಚ್ಚಣ್ಣವರ ಮಾತನಾಡಿ, ದೇಶದ ಅಭಿವೃದ್ಧಿಯನ್ನು ವಿವಿಧ ಆಯಾಮಗಳಲ್ಲಿ ನೋಡುತ್ತಾರೆ. ಅದರಲ್ಲಿ ಪ್ರವಾಸೋದ್ಯಮವು ಅತ್ಯಂತ ಪ್ರಮುಖ ಪಾತ್ರ ಹೊಂದಿದೆ. ಪ್ರವಾಸೋದ್ಯಮದಿಂದ ಮನಸ್ಸಿಗೆ ನೆಮ್ಮದಿ ನೀಡಿ ಜೀವನದಲ್ಲಿ ವಿಶೇಷ ಅನುಭವ ನೀಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಕುರಿತು ಆಯೋಜಿಸಿದ್ದದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಶ್ರೀ ವೀರನಾರಾಯಣ ಮತ್ತು ತ್ರಿಕೂಟೇಶ್ವರ ದೇವಸ್ಥಾನ ಸಮಿತಿ ಕಾರ್ಯದರ್ಶಿ ಆನಂದ ಪೊತ್ನೀಸ್, ಬಿ.ಬಿ. ಅಸೂಟಿ, ಕೆಡಿಪಿ ಸಮಿತಿಯ ಸದಸ್ಯ ಎಸ್.ಎನ್. ಬಳ್ಳಾರಿ, ಅಶೋಕ ಮಂದಾಲಿ, ಲಕ್ಕುಂಡಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ, ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ವಿ.ಎಸ್. ಕೊಳ್ಳಿ ಸೇರಿದಂತೆ ಗಣ್ಯರು ಹಾಜರಿದ್ದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ್ವರ ವಿಭೂತಿ ಸ್ವಾಗತಿಸಿದರು, ಉಪನ್ಯಾಸಕ ಬಾಹುಬಲಿ ಜೈನ ಕಾರ್ಯಕ್ರಮ ನಿರ್ವಹಿಸಿದರು.

ಕರ್ನಾಟಕ ಖನಿಜ ಅಬಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪ್ರವಾಸೋದ್ಯಮ ದಿನಾಚರಣೆಯ ಮೂಲಕ ಜಗತ್ತಿನಲ್ಲಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಇರಬೇಕು ಎಂದು ಸೂಚಿಸಲಾಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಲವಾರು ರಾಜರು, ಮಠಾಧೀಶರು ಸೇರಿದಂತೆ ಸಾಕಷ್ಟು ಮಹನೀಯರು ಕೊಡುಗೆ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ವಿಶೇಷ ಕಾಳಜಿ ವಹಿಸಿ ಅದನ್ನು ಉಳಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಅದರ ಪರಿಚಯ ಮಾಡಬೇಕು ಎಂದು ನುಡಿದರು.

ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ಗದುಗಿನ ವೀರನಾರಾಯಣ, ಬೇಲೂರಿನ ಚೆನ್ನಕೇಶವ, ನಂದಿ ನಾರಾಯಣ ಹಾಗೇಯೇ ರಾಷ್ಟ್ರಕೂಟ ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ಲಕ್ಕುಂಡಿ ಒಂದು ಕಾಲದಲ್ಲಿ ವೈಭವದಿಂದ ಮೆರದಿತ್ತು. ಹಾಗಾಗಿ ಅದು ಅಜರಾಮರವಾಗಿ ಉಳಿಯಬೇಕಿತ್ತು. ಆದರೆ ನಮ್ಮ ಪರಿಸ್ಥಿತಿ, ಮತ್ತು ಮನಸ್ಥಿತಿಗೆ ಅನುಗುಣವಾಗಿ ಎಲ್ಲವೂ ಬದಲಾಯಿಸಿದ್ದೇವೆ. ಇಂದು ನಾವೆಲ್ಲರೂ ಜಾಗೃತರಾಗಿ ಮೂಲ ದೇವಾಲಯ, ವಾಸ್ತುಶಿಲ್ಪವನ್ನು ಉಳಿಸಿಕೊಂಡು ಅದಕ್ಕೆ ಗೌರವ ನೀಡಿ ಉಳಿದವರಿಗೂ ಗೌರವ ಬರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.

 


Spread the love

LEAVE A REPLY

Please enter your comment!
Please enter your name here