ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಸುಖ-ದುಃಖ ಶಾಶ್ವತವಲ್ಲ. ಹಗಲು-ರಾತ್ರಿಯಂತೆ ಸದಾ ತಿರುಗುತ್ತಲೇ ಇರುತ್ತವೆ. ಮನುಷ್ಯನ ಜೀವನ ಬಹಳಷ್ಟು ಒತ್ತಡಗಳಿಂದ ಕೂಡಿದೆ. ಒಂದಿಷ್ಟಾದರೂ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಂಡು ಬಾಳಿದರೆ ಜೀವನದಲ್ಲಿ ಸುಖ, ಶಾಂತಿ ಕಾಣಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಶತರುದ್ರಯಾಗ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನಿಗೆ ಆಧ್ಯಾತ್ಮಿಕ ಆದಿಭೌತಿಕ ಮತ್ತು ಆದಿ ದೈವಿಕ ಎಂಬ ಮೂರು ದುಃಖಗಳಿಂದ ಬಂಧಿತನಾಗಿದ್ದಾನೆ. ಈ ದುಃಖ, ತಾಪತ್ರಯಗಳಿಂದ ಮುಕ್ತನಾಗಲು ಭಗವಂತನ ಚಿಂತನೆ, ಧ್ಯಾನ, ಪೂಜೆಯ ಅವಶ್ಯಕತೆಯಿದೆ. ಯಾವುದರಲ್ಲಿ ಈ ಜಗತ್ತು ಹುಟ್ಟಿ ಕೊನೆಗೆ ಯಾವುದರಲ್ಲಿ ಕೊನೆಗೊಳ್ಳುವುದೋ ಅಂಥ ಪರಮಾತ್ಮನನ್ನು ಪೂಜಿಸಿ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಭಗವಂತ ಕೊಟ್ಟ ಕೊಡುಗೆಗೆ ಸರಿಸಾಟಿಯಾದುದು ಜಗದಲ್ಲಿ ಇನ್ನೊಂದು ಯಾವುದೂ ಇಲ್ಲ.
ಧಾರ್ಮಿಕ ವಿಧಿ-ವಿಧಾನಗಳು ಜೀವನ ಶ್ರೇಯಸ್ಸಿಗಾಗಿ ಇವೆಯೇ ಹೊರತು ಅವನತಿಗಲ್ಲ. ಪ್ರಾಚೀನ ಪರಂಪರೆ, ಆದರ್ಶಗಳನ್ನು ನಿರ್ಲಕ್ಷಿಸಬಾರದು. ಈ ವಿಧಿ-ವಿಧಾನಗಳಿಂದ ಪರಮಾತ್ಮನ ಸಂಪ್ರೀತಿಯನ್ನು ಜೀವಾತ್ಮ ಪಡೆಯಲು ಸಾಧ್ಯವಾಗುತ್ತದೆ. ಇವುಗಳ ಆಚರಣೆಯಿಂದಾಗುವ ಪ್ರಯೋಜನವನ್ನು ಶಾಸ್ತ್ರಗಳು ನಮಗೆ ಬೆಳಕು ತೋರುತ್ತವೆ. ಉತ್ತರಾಯಣ ಪುಣ್ಯಕಾಲ ಪ್ರಾಪ್ತವಾದ ಶುಭ ದಿನದಲ್ಲಿ ಲೋಕ ಕಲ್ಯಾಣ-ಸಾಮರಸ್ಯ ಸೌಹಾರ್ದತೆಯ ಬದುಕಿಗಾಗಿ ಮೂರು ದಿನಗಳ ಕಾರ್ಯಕ್ರಮ ತಮಗೆ ತೃಪ್ತಿ ತಂದಿದೆ. ಜಗನ್ನಿಯಾಮಕನಾದ ಪರಮಾತ್ಮ ಸಕಲರಿಗೂ ಶಾಂತಿ-ಸನ್ಮಂಗಲವನ್ನು ಅನುಗ್ರಹಿಸಲೆಂದು ಹಾರೈಸಿದರು.
ಸಮಾರಂಭದಲ್ಲಿ ಪಾಲ್ಗೊಂಡ ರಾಯಚೂರು ಕಿಲ್ಲಾ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪೂರ್ವದ ಋಷಿ ಮುನಿಗಳು ಮತ್ತು ಆಚಾರ್ಯರು ಮಾನವನ ಸುಖ ಸಮೃದ್ಧಿಯ ಬದುಕಿಗಾಗಿ ಹಲವಾರು ನೀತಿ ಸಂಹಿತೆ ಬೋಧಿಸಿದ್ದಾರೆ. ಅರಿವಿನ ಹಾದಿಯಲ್ಲಿ ನಡೆದು ಮಾನವ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಮಾನಸಿಕ ಶಾಂತಿ, ಜೀವನ ಶ್ರೇಯಸ್ಸಿಗಾಗಿ ಧರ್ಮದ ನೀತಿ ಸೂತ್ರಗಳನ್ನು ಎಲ್ಲರೂ ಪರಿಪಾಲಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿಗಳಾದ ಬೆಳಗಾಲಪೇಟೆ ಸಿದ್ಧಲಿಂಗಯ್ಯ ಶಾಸ್ತ್ರಿಗಳು ಶಾಸ್ತ್ರೋಕ್ತವಾಗಿ ಅತಿರುದ್ರಯಾಗ ಪೂಜಾ ವಿಧಿ ವಿಧಾನಗಳನ್ನು ಗುರುಕುಲ ಸಾಧಕರೊಂದಿಗೆ ನೆರವೇರಿಸಿದರು.
ಗುರುಕುಲ ಸಾಧಕರಿಂದ ಪ್ರಾರ್ಥನೆ ಜರುಗಿತು. ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವೀರೇಶ ಕುಲಕರ್ಣಿ ನಿರೂಪಿಸಿದರು.