ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿ ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಅ.3ರಿಂದ ಅ.12ರವರೆಗೆ ಸಡಗರ ಸಂಭ್ರಮದಿಂದ ಶಕ್ತಿ ದೇವತೆಗಳ ಆರಾಧನೆ ಜರುಗಲಿದೆ.
ಶಿರಹಟ್ಟಿಯ ಮರಾಠ ಗಲ್ಲಿಯಲ್ಲಿ ಶ್ರೀ ಅಂಬಾಭವಾನಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ 18ನೇ ವರ್ಷದ ನವರಾತ್ರಿ ಮಹೋತ್ಸವದ ಅಂಗವಾಗಿ ಅ.೩ರಂದು ಶ್ರೀ ಹೊಳಲಮ್ಮದೇವಿ ದೇವಸ್ಥಾನದ ದಿವ್ಯಜ್ಯೋತಿಯೊಂದಿಗೆ ದೇವಸ್ಥಾನದಲ್ಲಿ ಘಟಸ್ಥಾಪನಾ ನಡೆಯಲಿದ್ದು, ಅ.3ರಿಂದ ಅ.11ರವರೆಗೆ ನಿತ್ಯವೂ ಸಾಯಂಕಾಲ 7ರಿಂದ 9ರವರೆಗೆ ಶ್ರೀ ದೇವಿ ಪುರಾಣ ಪ್ರವಚನ, ಅ.12ರಂದು ಶ್ರೀ ದೇವಿ ಬನ್ನಿ ಮುಡಿಯುವ ಕಾರ್ಯಕ್ರಮ ಹಾಗೂ ನಿತ್ಯ ಅನ್ನಸಂತರ್ಪಣೆ ನೆರವೇರಲಿದೆ.
ಕೋಟೆ ಓಣಿಯಲ್ಲಿರುವ ಶ್ರೀ ಗ್ರಾಮದೇವತೆ (ದ್ಯಾಮವ್ವ) ದೇವಸ್ಥಾನದಲ್ಲಿ, ಡಾ. ಅಂಬೇಡ್ಕರ ನಗರದಲ್ಲಿರುವ ಶ್ರೀ ಮರಿಯಮ್ಮದೇವಿ ದೇವಸ್ಥಾನ ಸೇರಿದಂತೆ ಪಟ್ಟಣದ ವಿವಿಧ ಶಕ್ತಿ ದೇವತೆಗಳ ದೇವಸ್ಥಾನದಲ್ಲೂ ಸಹ ಅ.3ರಿಂದ 12ರವರೆಗೆ ನಿತ್ಯವೂ ಪೂಜೆ-ಪುನಸ್ಕಾರಗಳು, ಭಜನೆ ಕಾರ್ಯಕ್ರಮಗಳು ನಡೆಯಲಿವೆ.
ತಾಲೂಕಿನ ಶಕ್ತಿದೇವತೆ ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ ದೇವಸ್ಥಾನದಲ್ಲಿ ಅ.3ರಿಂದ ಅ.12ರವರೆಗೆ ನವರಾತ್ರಿ ಉತ್ಸವ, ಪುರಾಣ ಪ್ರವಚನ ಹಾಗೂ ಅನ್ನಸಂತರ್ಪಣೆ ವೈಭವದಿಂದ ನಡೆಯಲಿದೆ.