ಗದಗ: ಸಿದ್ದರಾಮಯ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವು ನಾನಾ ಮಹಿಳೆಯರಿಗೆ ಹಲವಾರು ರೀತಿಯಲ್ಲಿ ಉಪಯೋಗವಾಗುತ್ತಿದೆ. ಇತ್ತೀಚೆಗಷ್ಟೇ ಗೃಹಲಕ್ಷ್ಮೀ ಹಣದಿಂದ ಮಹಿಳೆಯೊಬ್ಬರು ಫ್ರಿಡ್ಜ್ ಖರೀದಿಸಿದ್ದರು.
ಅದೇ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮತ್ತೊಬ್ಬ ಮಹಿಳೆ ಫ್ಯಾನ್ಸಿ ಸ್ಟೋರ್ ಆರಂಭಿಸಿದ್ದರು. ಇತ್ತೀಚೆಗೆ ಅಜ್ಜಿಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಅಲ್ಲದೇ ಇದೇ ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣದಿಂದ ಬೆಳಗಾವಿಯ ಮಹಿಳೆಯೊಬ್ಬರು ತಮ್ಮ ಪತಿಯ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ್ದರು.
ಇದೀಗ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಕೊಳವೆ ಬಾವಿ ಕೊರೆಸಿದ್ದಾರೆ. ಬೋರ್ವೆಲ್ನಲ್ಲಿ ಅವರಿಗೆ ನೀರು ಕೂಡ ದೊರೆತಿದೆ. ಇದೀಗ ಈ ಬಗ್ಗೆ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಹರ್ಷ ವ್ಯಕ್ತಪಡಿಸಿದ್ದಾರೆ.
ಅತ್ತೆ ಹಾಗೂ ಸೊಸೆ ಸೇರಿ ಗೃಹಲಕ್ಷ್ಮಿ ಯೋಜನೆಯಿಂದ ದೊರೆತ 44 ಸಾವಿರ ರೂ. ಕೊಳವೆ ಬಾವಿ ಕೊರೆಸಲು ನೀಡಿದ್ದಾರೆ. ಒಟ್ಟು 60 ಸಾವಿರ ರೂಪಾಯಿ ಖರ್ಚು ಆಗಿದೆ. ಅದರ ಗೃಹಲಕ್ಷ್ಮಿ ಯೋಜನೆಯ 44 ಸಾವಿರ ರೂ. ಬಳಕೆ ಮಾಡಿದ್ದಾರೆ. ಇನ್ನುಳಿದ್ದ ಹಣ ಮಗ ನೀಡಿದ್ದಾನೆ ಎಂದು ಮಾಬುಬೀ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ನೀಡಿದ ಗೃಹಲಕ್ಷ್ಮಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮಾಬುಬೀ ಹೇಳಿದ್ದಾರೆ.