ಜಕ್ಕಲಿಯಲ್ಲಿ ಗಮನ ಸೆಳೆದ ಕುಸ್ತಿ ಪಂದ್ಯಾವಳಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕುಸ್ತಿ ಕ್ರೀಡೆಯಲ್ಲಿ ಸೋಲು-ಗೆಲುವುವನ್ನು ಸಮಾನವಾಗಿ ಸ್ವೀಕರಿದಲ್ಲಿ ಯಶಸ್ಸು ಸಾಧ್ಯ ಎಂದು ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

Advertisement

ಅವರು ಸಮೀಪದ ಜಕ್ಕಲಿ ಗ್ರಾಮದ ಶ್ರೀ ಮಾರುತೇಶ್ವರ ಹೊಂಡ ತುಳುಕಿಸುವ ಕಾರ್ಯಕ್ರಮ, ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಹಾಗೂ ಮೂಕಪ್ಪಜ್ಜ ಸಂಕನೂರ ಅವರ 17ನೇ ಪುಣ್ಯರಾಧನೆ ನಿಮಿತ್ತ ಶ್ರೀ ಮಾರುತೇಶ್ವರ ವ್ಯಾಯಾಮ ಶಾಲೆಯ ಸಂಘಟಿಕರು ಎರಡು ದಿನ ಆಯೋಜಿಸಿದ್ದ ರಾಜ್ಯಮಟ್ಟದ ಜಂಗಿ ನಿಖಾಲಿ ಪಂದ್ಯಾವಳಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ನಮ್ಮ ರಾಜ-ಮಹಾರಾಜರು ಕುಸ್ತಿಯನ್ನು ಏರ್ಪಡಿಸಿ ಪೈಲ್ವಾನರನ್ನು ಕರೆಸಿ ಅವರಿಗೆ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಾ ಆಟವನ್ನು ಆಡಿಸುತ್ತಿದ್ದರು. ಅದೇ ರೀತಿ ಮಾರುತೇಶ್ವರ ವ್ಯಾಯಾಮ ಶಾಲೆಯ ಸಂಘಟಿಕರು ಇಂತಹ ಕ್ರೀಡೆಯನ್ನು ಇಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ಕ್ರೀಡೆಯನ್ನು ಪ್ರೋತ್ಸಾಹಿಸಬೇಕೆಂದರು.

ಇದೇ ವೇಳೆ ಕುಸ್ತಿಪಟು ದಿ. ಮೂಕಪ್ಪಜ್ಜ ಸಂಕನೂರ ಇವರನ್ನು ಸ್ಮರಿಸಿದರು. ಬಳಿಕ ಪೂಜ್ಯಶ್ರೀಗಳನ್ನು ಸನ್ಮಾನಿಸಲಾಯಿತು. ಗ್ರಾಮದ ಖ್ಯಾತ ಹಿರಿಯ ಪೈಲ್ವಾನ್ ದಿ. ಮೂಕಪ್ಪಜ್ಜ ಸಂಕನೂರ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಮೌನಾಚರಣೆ ಮಾಡಿದ್ದು ವಿಶೇಷವಾಗಿತ್ತು.

ವಿಶೇಷ ಕುಸ್ತಿಯಲ್ಲಿ ಕಮತಗಿಯ ಹುಸೇನ ಪೈಲ್ವಾನ ಅವರನ್ನು ಚಿತ್ ಮಾಡುವ ಮೂಲಕ ಗಮನ ಸೆಳೆದ ಬೆಳಗಾವಿಯ ಹನಮಂತ ಪೈಲ್ವಾನ 3 ಕೆಜಿ ಬೆಳ್ಳಿಗದೆ, ನಗದು ಹಣ ಪಡೆದು ವಿಜಯಶಾಲಿಯಾದರು. ಬೆಳಗಾವ್, ಡಾವಣಗೇರಿ, ಗದಗ, ಧಾರವಾಡ, ಬಾಗಲಕೋಟಿ, ತಡಸಿನಕೊಪ್ಪ, ಲಕ್ಕುಂಡಿ, ಕರಡಿಕೊಪ್ಪ, ಹುಯಿಲಗೋಳ, ಕಡಪಟ್ಟಿ, ರೋಣ, ಅಬ್ಬಿಗೇರಿ ಸೇರಿದಂತೆ ರಾಜ್ಯದ ವಿವಿಧ ಗ್ರಾಮೀಣ ಭಾಗಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ಜಗಜಟ್ಟಿಗಳು ಅಖಾಡದಲ್ಲಿ ತಮ್ಮ ಶಕ್ತಿಪ್ರದರ್ಶನ ಮಾಡಿದ್ದು, ಮೈನವಿರೇಳಿಸಿದ ಪೈಲ್ವಾನರ ಕಾಳಗಕ್ಕೆ ನೂರಾರು ಸಂಖ್ಯೆಯ ಕ್ರೀಡಾ ಪ್ರೇಮಿಗಳು ಸಾಕ್ಷಿಯಾದರು.

ಗ್ರಾಮದ ಪೈಲ್ವಾನ್ ಬಸವರಾಜ ಹಡಪದ ಪಾರಿತೋಷಕ, ನಗದು ಬಹುಮಾನ ಪಡೆದರು.

ಮುಖ್ಯ ಅತಿಥಿಯಾಗಿ ಶಿವನಾಗಪ್ಪ ದೊಡ್ಡಮೇಟಿ, ಅಶೋಕಪ್ಪ ಕಡಗದ, ಕಿರಣ ಮುಗಳಿ, ಎಮ್.ಎಸ್. ಕೋರಿ, ಶೇಖರಪ್ಪ ಆದಿ, ಬಸವರಾಜ ಶ್ಯಾಶೆಟ್ಟಿ, ಅಂದಪ್ಪ ಸಂಕನೂರ, ಮುತ್ತಣ್ಣ ಅಕ್ಕಿಶೆಟ್ಟರ, ಬಸವರಾಜ ಆದಿ, ಶಿವರಾಜ ಮುಗಳಿ, ಬಸಪ್ಪ ಕೊಪ್ಪದ ಸೇರಿದಂತೆ ಇನ್ನಿತರರು ಇದ್ದರು.

ಶಲವಡಿಯ ದೇವಪ್ಪ, ಕನ್ಯಾಳದ ದೇವಪ್ಪ, ಹೇಮಣ್ಣ, ಕುರ್ತುಕೋಟಿಯ ನಿವೃತ್ತ ಎಎಸ್‌ಐ ರಾಮಣ್ಣ ಹಲಗಿ, ಅಬ್ಬಿಗೇರಿಯ ರಾಯಪ್ಪ, ಗಾಂಧೆಪ್ಪ ಕುರಿ, ಧರ್ಮಣ್ಣ ಆರೇರ್, ಯಲ್ಲಪ್ಪ ಮಡಿವಾಳರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.

ಲಕ್ಷ್ಮೇಶ್ವರದ ದೇವಪ್ಪ ಗಡೇದ, ಹೊಂಬಳದ ಹುಸೇನಸಾಬ, ಪ್ರಕಾಶಪ್ಪ ಹೊಸಮನಿ ವೀಕ್ಷಕ ವಿವರಣೆ ನೀಡಿದರು.

ಗೆದ್ದ ಕುಸ್ತಿಪಟುಗಳನ್ನು ಪ್ರೇಕ್ಷಕರು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು. ಪ್ರಥಮ ಸ್ಥಾನದ ಬೆಳಗಾವಿಯ ಪವನ್ ಅವರೊಂದಿಗೆ ತೀವ್ರ ಸೆಣಸಾಟ ನಡೆಸಿದ ಪೈಲ್ವಾನ ತಡಸಿನಕೊಪ್ಪದ ನಾಗರಾಜ ಅವರು ಎದುರಾಳಿಯನ್ನು ಚಾಕಚಕ್ಯತೆಯಿಂದ ಕೆಡವಿ 5 ಸಾವಿರ ನಗದು ಬಹುಮಾನ ತಮ್ಮದಾಗಿಸಿಕೊಂಡರು. ದ್ವಿತೀಯ ಮತ್ತು ತೃತೀಯ ಸ್ಥಾನದ ಕ್ರೀಡಾಪಟುಗಳಾದ ತಡಸಿನಕೊಪ್ಪದ ಶಶಾಂಕ ಜೊತೆ ಪುಡಕಲಕಟ್ಟಿಯ ಸಿದ್ದಾರೂಢ, ಕರಡಿಕೊಪ್ಪದ ಪ್ರಥಮ್ ಜೊತೆ ಬಡಕುದರಿಯ ಪ್ರವೀಣ ಸಮಜೋಡಿ ಆಟ ಪ್ರದರ್ಶಿಸಿ ನಗದು ಬಹುಮಾನ ಪಡೆದರು.


Spread the love

LEAVE A REPLY

Please enter your comment!
Please enter your name here