ವಿಜಯಸಾಕ್ಷಿ ಸುದ್ದಿ, ಗದಗ: ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬರೆಯಿಸುವುದರಿಂದ ಮುಂದಿನ ದಿನಗಳಲ್ಲಿ ಲಿಂಗಾಯತರು ಅಲ್ಪಸಂಖ್ಯಾತರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಬೇಕು. ಉಪ ಜಾತಿಗಳ ಕಾಲಂನಲ್ಲಿ ನಿಮ್ಮ ನಿಮ್ಮ ಉಪ ಜಾತಿ ನಮೂದಿಸಬೇಕು. ಕೆಲವೊಂದಿಷ್ಟು ಮಠಾಧೀಶರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಅವರ ಮಾತಿಗೆ ಕಿವಿಗೊಡದೇ ಲಿಂಗಾಯತರೆಲ್ಲರೂ ಧರ್ಮದಲ್ಲಿ ಲಿಂಗಾಯತ ಎಂದೇ ನಮೂದಿಸಬೇಕು ಎಂದು ಬಾಗಲಕೋಟಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2ಎ ಎಂದು ಬರೆಸಿದರೆ ಶೇ. 15 ಇರುವುದರಿಂದ ಮೀಸಲಾತಿ ದೊರೆಯುವುದು ಹೆಚ್ಚು ಸಾಧ್ಯ ಎಂದು ಹೇಳುವವರು ಮಾಡುವ ತಪ್ಪು ಎಂದರೆ, 2ಎನಲ್ಲಿ 104 ಜಾತಿಗಳಿವೆ. ಅಂದರೆ ಸ್ಪರ್ಧೆ ಹೆಚ್ಚು ಇರುತ್ತದೆ. ಸೌಲಭ್ಯ ದೊರೆಯುವ ಸಾಧ್ಯತೆ ಕಡಿಮೆ. 3ಬಿಯಲ್ಲಿ ಕೇವಲ ಶೇ. 5 ರಿಸರ್ವೇಶನ್ ಇದ್ದರೂ ಆ ಗುಂಪಿನಲ್ಲಿ ಕೇವಲ 28 ಮಾತ್ರ ಜಾತಿಗಳಿವೆ. ಹೀಗಾಗಿ 3ಬಿಯಲ್ಲಿ ಇರುವ 28 ಜಾತಿಗಳಿಗಿಂತ 2ಎನಲ್ಲಿ ಇರುವ 104 ಜಾತಿಗಳಿಗೆ ಹೋಲಿಸಿದರೆ 3ಬಿಯಲ್ಲಿ ಸುಮಾರು 4 ಪಟ್ಟು ಜಾತಿಗಳ ಸಂಖ್ಯೆ ಕಡಿಮೆ ಇದೆ. ಹೀಗೆ ಮೀಸಲಾತಿ ಸೌಲಭ್ಯ ದೊರೆಯುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದರು.
ಯಾವುದೇ ಜಾತಿ, ಯಾವುದೇ ಧರ್ಮದ ಗುಂಪಿನಲ್ಲಿ ಮತ್ತು ಎಸ್ಸಿ/ಎಸ್‌ಟಿ ಗುಂಪುಗಳಲ್ಲಿ ನಿಮ್ಮ ಜಾತಿ ಅಥವಾ ಧರ್ಮದ ಹೆಸರು ಇರದಿದ್ದರೆ ನೀವು ಸಂತೋಷ ಪಡಬೇಕು. ಏಕೆಂದರೆ, ನಿಮ್ಮ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಳಿಗಿಂತ ಕಡಿಮೆ ಇದ್ದರೆ ನಿಮಗೆ ಶೇ. 10 ವಿಶೇಷ ರಿಸರ್ವೇಶನ್ ಸೌಲಭ್ಯ ಲಭ್ಯವಿದೆ ಎಂಬುದನ್ನು ನೆನಪಿಡಿ. ಹೀಗಾಗಿ, ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿದರೆ ಯಾವ ವ್ಯತ್ಯಾಸವೂ ಆಗುವುದಿಲ್ಲ. ಆದ್ದರಿಂದ ಈಗ ನಡೆಯುತ್ತಿರುವ ಕರ್ನಾಟಕ ಸರ್ಕಾರದ ಸಾಮಾಜಿಕ ಆರ್ಥಿಕ ಸಮೀಕ್ಷೆಯಲ್ಲಿ ನಿಮ್ಮ ಧರ್ಮ ‘ಲಿಂಗಾಯತ’ ಎಂದು ಬರೆಸಿರಿ. ಅದರಿಂದ ಯಾವುದೇ ಹಾನಿ ಇಲ್ಲ ಎಂದು ಮನವರಿಕೆ ಮಾಡಿದರು.
ಈ ವೇಳೆ ಕೆ.ಎಸ್. ಚೆಟ್ಟಿ, ಪಿ.ಕೆ. ಕರಿಗೌಡ್ರ, ಬಾಲಚಂದ್ರ ಭರಮಗೌಡ್ರ, ಶ್ರೀದೇವಿ ಶೆಟ್ಟರ, ಬಸವರಾಜ ಹಿರೇಹಡಗಲಿ, ಈಶಣ್ಣ ಮುನವಳ್ಳಿ, ಪ್ರಕಾಶ ಅಸುಂಡಿ, ಡಾ. ಜಿ.ಬಿ. ಪಾಟೀಲ, ಗೌರಮ್ಮ ಬಡಿಗಣ್ಣನವರ ಉಪಸ್ಥಿತರಿದ್ದರು.
ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಲಿಂಗಾಯತ ಮತ್ತು ವೀರಶೈವ ಬೇರೆಬೇರೆಯಾಗಿದೆ. ಇವೆರೆಡು ಎಣ್ಣೆ ಮತ್ತು ನೀರು ಇದ್ದಂತೆ — ಒಂದಾಗಲು ಸಾಧ್ಯವೇ ಇಲ್ಲ. ಲಿಂಗಾಯತರ ಧರ್ಮಗುರುಗಳು ಬಸವಣ್ಣನವರಾಗಿದ್ದಾರೆ. ಜಾತಿ ತಾರತಮ್ಯ ಇಲ್ಲದ ಸಮ ಸಮಾಜ ನಿರ್ಮಿಸುವುದು ಬಸವಣ್ಣನವರ ಕನಸಾಗಿತ್ತು. ಇದನ್ನು ಜಗತ್ತಿಗೆ ತಲುಪಿಸಲು ಸಾಧ್ಯವಾಗಲಿಲ್ಲ. ಬೌದ್ಧ ಧರ್ಮಕ್ಕೆ ರಾಜರು ಆಶ್ರಯ ನೀಡಿದರು, ಅದು ಜಗತ್ತಿನಾದ್ಯಂತ ವಿಸ್ತಾರಗೊಂಡಿತು. ಆದರೆ, ಬಸವಣ್ಣನವರಿಗೆ ಆಶ್ರಯ ಸಿಗದೇ ಇರುವುದು ದುರ್ದೈವದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.