ಸಮಾಧಾನ ಚಿತ್ತದಿಂದ ಪರೀಕ್ಷೆ ಬರೆಯಿರಿ

0
naregal
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ. ನಿಮ್ಮಲ್ಲಿನ ದುಗುಡವನ್ನು ದೂರೀಕರಿಸಿ ಸಮಾಧಾನದಿಂದ ಉತ್ತರ ಬರೆದರೆ ಯಶಸ್ಸು ಖಂಡಿತವಾಗಿಯೂ ನಿಮ್ಮ ವಶವಾಗುತ್ತದೆ ಎಂದು ಹಾಲಕೆರೆ ಸಂಸ್ಥಾನದ ಪೀಠಾಧಿಪತಿ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಹೇಳಿದರು.

Advertisement

ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಪ್ರಾರಂಭಗೊಂಡ ಪಿಯುಸಿ ಪರೀಕ್ಷೆಯ ಪರೀಕ್ಷಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಶ್ರೀಗಳು ಆಶೀರ್ವಚನ ನೀಡಿದರು.

ಗದಗ ಜಿಲ್ಲೆಯಲ್ಲಿ ನಮ್ಮ ಸಂಸ್ಥೆಯ ಹೆಸರು ಮುಂಚೂಣಿಯಲ್ಲಿದೆ. ನಮ್ಮ ಗುರುಗಳಾಗಿದ್ದ ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು ಎಂದಿಗೂ ನಕಲಿಗೆ ಪ್ರೋತ್ಸಾಹ ನೀಡಿದವರಲ್ಲ. ಈಗ್ಗೆ 34 ವರ್ಷಗಳ ಹಿಂದೆಯೇ ಅವರು ನಕಲನ್ನು ಈ ಸಂಸ್ಥೆಯಿಂದ ಹೊಡೆದೋಡಿಸಿ ಪ್ರತಿಭೆಗೆ ಗೌರವ ಸಿಗಬೇಕೆಂದು ಶ್ರಮಿಸಿ ಯಶಸ್ವಿಯಾದರು. ಅವರ ಆಶೀರ್ವಾದದಿಂದ ಅವರ ಹೆಸರಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ನೀವು ನಕಲಿಗೆ ಮನಸ್ಸು ಮಾಡದೆ ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆಯಿರಿ. ಇದು ಭವಿಷ್ಯದಲ್ಲಿ ನಿಮ್ಮ ಜೀವನದಲ್ಲಿ ಒಂದು ಉತ್ತಮ ಮೌಲ್ಯವಾಗಲಿದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಎಲ್ಲ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.

ನಂತರ ಶ್ರೀಗಳು ನೂತನ ಶ್ರೀ ಅಭಿನವ ಅನ್ನದಾನೇಶ್ವರ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಪ.ಪೂ. ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದರು. ಸಂಸ್ಥೆಗೆ ಎರಡು ಪರೀಕ್ಷಾ ಕೇಂದ್ರಗಳು ಮಂಜೂರಾದದ್ದಕ್ಕೆ ಶ್ರೀಗಳು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಸದಸ್ಯರಾದ ಡಾ. ಜಿ.ಕೆ ಕಾಳೆ, ವೀರಣ್ಣ ಶೆಟ್ಟರ, ನಿಂಗನಗೌಡ ಲಕ್ಕನಗೌಡ್ರ, ನಿವೃತ್ತ ಉಪನ್ಯಾಸಕ ತಳಬಾಳ, ಡಾ. ಶಿವಯ್ಯ ರೋಣದ, ಪ್ರಾಚಾರ್ಯೆ ಅನಸೂಯಾ ಪಾಟೀಲ, ಪರೀಕ್ಷಾ ಅಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು. ಎಸ್.ಎ. ಪಿಯು ಕಾಲೇಜ್ ಪ್ರಾಚಾರ್ಯ ವೈ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಫ್.ಎನ್. ಹುಡೇದ, ನಂದೀಶ ಅಚ್ಚಿ ನಿರ್ವಹಿಸಿದರು.

ಪರೀಕ್ಷೆಯೆಂದು ಯಾರೂ ಹೆದರಬೇಕಾಗಿಲ್ಲ. ಒಂದಿಡೀ ವರ್ಷ ನೀವು ಓದಿದ ವಿಷಯಗಳ ಬಗ್ಗೆ ಪ್ರಶ್ನೆಗಳಿರುತ್ತವೆ. ಇದನ್ನು ಸಮರ್ಪಕವಾಗಿ ನೆನಪಿಸಿಕೊಂಡು ನೀವು ಸರಿಯಾದ ಉತ್ತರಗಳನ್ನು ಬರೆದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಕೆ ಮಾಡಿರಿ ಎಂದು ಶ್ರೀಗಳು ಹೇಳಿದರು.


Spread the love

LEAVE A REPLY

Please enter your comment!
Please enter your name here