ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಕನ್ನಡ ಗೆಳೆಯರ ಬಳಗವು ಪ್ರತಿ ವರ್ಷ ಉತ್ತಮ ನಿರ್ವಹಣೆ ತೋರಿರುವ ಕನ್ನಡ ಮಾಧ್ಯಮ ಶಾಲೆಗೆ ನೀಡುವ ‘ಉತ್ತಮ ಶಾಲೆ’ ಬಹುಮಾನಕ್ಕೆ ಗದಗ ಜಿಲ್ಲೆಯ ಮುಂಡರಗಿಯ ಯಕ್ಲಾಸಪೂರದ ಶ್ರೀಮತಿ ಪಾರ್ವತೇವ್ವ ಕೋಂ ಹಿರಿಯ ಬಸಪ್ಪ ಹಳೇಮನಿ ಸರ್ಕಾರಿ ಪ್ರೌಢ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಈ ಬಹುಮಾನವನ್ನು ಸಾಹಿತಿ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಶತಮಾನೋತ್ಸವದ ನೆನಪಿನಲ್ಲಿ ನೀಡಲಾಗುತ್ತಿದೆ.
ಸತತ 11 ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಶೇ.100 ಹಾಗೂ ಪ್ರಸ್ತುತ ಸಾಲಿನಲ್ಲಿ ಶೇ. 90ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಶಾಲೆಯು ಉತ್ತಮ ಕಟ್ಟಡ ಹೊಂದಿದ್ದು, ವಿಜ್ಞಾನ, ಕಂಪ್ಯೂಟರ್ ಪ್ರಯೋಗಾಲಯಗಳು, ಸಭಾಂಗಣ ಎಲ್ಲವೂ ವ್ಯವಸ್ಥಿತವಾಗಿವೆ. ಶಾಲೆಯ ಅಧ್ಯಾಪಕರು ಸ್ವಂತ ಹಣದಿಂದ ಉತ್ತಮ ಶೌಚಾಲಯ ವ್ಯವಸ್ಥೆ ಮಾಡಿರುವುದು ಗಮನೀಯ ಅಂಶ. ಹೀಗೆ ಹಲವು ನೆಲೆಗಳಲ್ಲಿ ಈ ಶಾಲೆಯಲ್ಲಿ ಉತ್ತಮ ವಾತಾವರಣ ಇದೆ ಎಂಬುದು ಕನ್ನಡ ಕಾರ್ಯಕರ್ತರ ಅಭಿಪ್ರಾಯ.
ಡಿಸೆಂಬರ್ 9ರಂದು ಬೆಂಗಳೂರಿನ ನಯನಾ ಸಭಾಂಗಣದಲ್ಲಿ ಪ್ರೊ. ಮಲ್ಲೇಪುರಂ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಡಾ. ಎಲ್. ಹನುಮಂತಯ್ಯ ಅವರು ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿ ಪ್ರದಾನ, ಪುಸ್ತಕ ಬಹುಮಾನ ಪ್ರದಾನ ಮಾಡುವರು. ಅದೇ ಸಮಾರಂಭದಲ್ಲಿ 2025ನೇ ಸಾಲಿನ ಉತ್ತಮ ಶಾಲೆ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.



