ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಗೆ ಟಾಕ್ಸಿಕ್ ಸಿನಿಮಾ ತಂಡ ಗ್ಲಿಮ್ಸ್ ರಿಲೀಸ್ ಮಾಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದೆ. ಯಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಫುಲ್ ದಿಲ್ ಖುಷ್ ಆಗಿದ್ದಾರೆ.
ಯಶ್ ಅವರ ಬರ್ತ್ಡೇ ಹಿನ್ನೆಲೆಯಲ್ಲಿ ಅವರ ಟಾಕ್ಸಿಕ್ ಮೂವಿಯ ಫಸ್ಟ್ ಲುಕ್ ವಿಡಿಯೋ ರಿವೀಲ್ ಮಾಡಲಾಗಿದೆ. ಇದರಲ್ಲಿ ಯಶ್ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.
ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಅವರು ಒಳಗೆ ಬರುತ್ತಿರುವಾಗ ಅಲ್ಲಿ ಎಲ್ಲರೂ ಮೋಜಿನಲ್ಲಿ ತೇಲುತ್ತಾ ಇರುತ್ತಾರೆ. ಆಗ ಯಶ್ ಅವರು ಹೆಂಡದ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಸುರಿಯುತ್ತಾರೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ. ಸಿನಿಮಾ ಡ್ರಗ್ ಮಾಫಿಯಾ ಕುರಿತ ಕಥೆ ಇರಬಹುದು ಎಂದು ಊಹಿಸಲಾಗಿದ್ದು ಪಬ್ನಲ್ಲಿರುವ ದೃಶ್ಯಗಳು ಫಸ್ಟ್ ಲುಕ್ನಲ್ಲಿ ಕಾಣಿಸಿಕೊಂಡಿದೆ.
‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವೆಂಕಟ್ ನಾರಾಯಣ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಬಿಗ್ ಬಜೆಟ್ನಲ್ಲಿ ಮೂಡಿ ಬರುತ್ತಿದೆ. ಕೆಜಿಎಫ್ ಸಿನಿಮಾದ ಬಳಿಕ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.