‘ಕೆಜಿಎಫ್: ಚಾಪ್ಟರ್ 2’ ಮೂಲಕ ಜಾಗತಿಕ ಮಟ್ಟದಲ್ಲಿ ಅಬ್ಬರಿಸಿದ ರಾಕಿಂಗ್ ಸ್ಟಾರ್ ಯಶ್, ಇದೀಗ ‘ಟಾಕ್ಸಿಕ್’ ಚಿತ್ರದ ಮೂಲಕ ಮತ್ತೊಮ್ಮೆ ಭಾರತೀಯ ಸಿನೆಮಾ ಮಾರುಕಟ್ಟೆಯನ್ನು ನಡುಗಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಚಿತ್ರ ₹105 ಕೋಟಿ ಓವರ್ಸೀಸ್ ಅಡ್ವಾನ್ಸ್ ಡೀಲ್ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ಹಕ್ಕುಗಳು ಈಗಾಗಲೇ ₹120 ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದವು. ಇದೀಗ ಫಾರ್ಸ್ ಫಿಲ್ಮ್ ಸಂಸ್ಥೆ ವಿಶ್ವದಾದ್ಯಂತ ‘ಟಾಕ್ಸಿಕ್’ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಮಟ್ಟದ ವಿದೇಶಿ ವ್ಯವಹಾರಗಳಲ್ಲಿ ಒಂದಾಗಿ ದಾಖಲಾಗಿದೆ.
ಈ ಡೀಲ್ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಆವೃತ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇಂಗ್ಲಿಷ್ ಆವೃತ್ತಿಯ ಹಕ್ಕುಗಳು ಇನ್ನೂ ಬೇರೆ ಹಂತದಲ್ಲಿ ಇರುವುದರಿಂದ, ಮುಂದಿನ ದಿನಗಳಲ್ಲಿ ಮತ್ತೊಂದು ದೊಡ್ಡ ವ್ಯವಹಾರ ಸಾಧ್ಯತೆಗಳಿವೆ.
ಫಾರ್ಸ್ ಫಿಲ್ಮ್ಸ್ ಸಿಇಒ ಅಹಮದ್ ಗೋಲ್ಚಿನ್ ಹೇಳುವಂತೆ, “ಟಾಕ್ಸಿಕ್ ಕಥೆ ವಿಶ್ವದ ಪ್ರೇಕ್ಷಕರನ್ನು ತಲುಪಲಿದೆ. ಇದು ಗಡಿಗಳನ್ನು ಮೀರಿದ ಸಿನೆಮಾ ಅನುಭವ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಸಂಪೂರ್ಣ ಟೀಸರ್ ಅಥವಾ ಟ್ರೇಲರ್ ಬಿಡುಗಡೆಯಾಗಿಲ್ಲ. ಹೀರೋ ಇಂಟ್ರೋ ಟೀಸರ್ ಮಾತ್ರವೇ ಬಿಡುಗಡೆಯಾದರೂ ಚಿತ್ರಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಹವಾ ಸೃಷ್ಟಿಯಾಗಿದೆ. ಟ್ರೇಲರ್ ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ ಸಮೀಕರಣವೇ ಬದಲಾಗಬಹುದು ಎಂಬ ಮಾತು ಟ್ರೇಡ್ ವಲಯದಲ್ಲಿ ಕೇಳಿಬರುತ್ತಿದೆ.
ಮಾರ್ಚ್ 19ರಂದು ವಿಶ್ವದಾದ್ಯಂತ ‘ಟಾಕ್ಸಿಕ್’ ಬಿಡುಗಡೆಯಾಗಲಿದೆ. ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ನಟಿಸಿದ್ದಾರೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಿಸಿದೆ.
‘ಕೆಜಿಎಫ್ 2’ ಬಳಿಕ ಯಶ್ ಅಭಿನಯದ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ಮುಗಿಲೆತ್ತರದಲ್ಲಿದೆ. ಇದೇ ದಿನ ‘ಧುರಂಧರ್ 2’ ಕೂಡ ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್ ಕದನ ತೀವ್ರವಾಗಲಿದೆ.



