ಹಾಸನ: ನಟ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಮನೆ ಸಮೀಪದ ನಿವೇಶನಕ್ಕೆ ಸಂಬಂಧಿಸಿದ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಾಸನ ನಗರದ ವಿದ್ಯಾನಗರದಲ್ಲಿ ಇರುವ ಪುಷ್ಪಾ ಅವರ ಮನೆ ಬಳಿಯ ಸೈಟ್‌ನಲ್ಲಿ ಕಾಂಪೌಂಡ್ ವಿಚಾರವಾಗಿ ಪುಷ್ಪಾ ಮತ್ತು ಮೂಲ ಮಾಲೀಕ ದೇವರಾಜು ನಡುವೆ ವಾಗ್ವಾದ ನಡೆದಿದೆ.
ಸೈಟ್ ಬಳಿ ಪುಷ್ಪಾ ಆಗಮಿಸಿ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದಾಗ ದೇವರಾಜು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ದಾಖಲೆಗಳನ್ನು ತೋರಿಸುವಂತೆ ಪುಷ್ಪಾ ಕೇಳಿದ್ದಾರೆ. “ಸೆಲೆಬ್ರಿಟಿ ನನ್ನ ಮಗ, ನಾನಲ್ಲ. ನಾನು ಇಲ್ಲಿ ಹುಟ್ಟಿ ಬೆಳೆದವಳು” ಎಂದು ಪುಷ್ಪಾ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ದೇವರಾಜು ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆದಿದೆ.
ಪುಷ್ಪಾ ಅವರು ದೇವರಾಜು ವಿರುದ್ಧ ಗಂಭೀರ ಆರೋಪ ಮಾಡುತ್ತಾ, “ರೌಡಿಗಳನ್ನು ಕರೆದುಕೊಂಡು ಬಂದು ರೌಡಿಸಂ ಮಾಡ್ತೀಯಾ? ನಾನು ಎಸ್ಪಿಗೆ ದೂರು ಕೊಡ್ತೀನಿ. ಮತ್ತೆ ಇಲ್ಲಿಗೆ ಕಾಲಿಟ್ಟರೆ ಸುಮ್ಮನಿರಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಏನಿದು ಪ್ರಕರಣ?
ಈ ಹಿಂದೆ ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಸಂಬಂಧ ಯಶ್ ತಾಯಿ ಪುಷ್ಪಾ ಅವರಿಗೆ ಕೋರ್ಟ್‌ನಿಂದ ದೊಡ್ಡ ಶಾಕ್ ಎದುರಾಗಿತ್ತು. ಸುಮಾರು 1,500 ಚದರ ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕೋರ್ಟ್ ಅನುಮತಿಯ ಮೇರೆಗೆ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿತ್ತು. ಮೂಲ ಮಾಲೀಕ ದೇವರಾಜು ಈ ಕಾಂಪೌಂಡ್ ತೆರವುಗೊಳಿಸಿದ್ದರು.
ಈ ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಇತ್ತೀಚಿನ ವಾಗ್ವಾದದಿಂದ ಮತ್ತೆ ಸಾರ್ವಜನಿಕ ಗಮನ ಸೆಳೆದಿದೆ.



