ಮೈಸೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಬ್ರೇಕ್ ಹಾಕುವಂತೆ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, “ನನ್ನ ಪ್ರಕಾರ ಸಿಎಂ ಬದಲಾವಣೆ ಅಗತ್ಯವಿಲ್ಲ. ಸಿದ್ದರಾಮಯ್ಯ ಪೂರ್ಣ ಅವಧಿಗೂ ಮುಖ್ಯಮಂತ್ರಿ ಆಗಿಯೇ ಮುಂದುವರಿಯುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಯತೀಂದ್ರ, ನಾಯಕತ್ವ ಬದಲಾವಣೆ ವಿಚಾರ ಪದೇಪದೆ ಯಾಕೆ ಚರ್ಚೆ ಆಗುತ್ತಿದೆ ಗೊತ್ತಿಲ್ಲ. ಈ ಹಿಂದೆ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆದಿತ್ತೆ ಅನ್ನೋದ್ದೂ ನನಗೆ ತಿಳಿದಿಲ್ಲ” ಎಂದು ತಿಳಿಸಿದ್ದಾರೆ.
ಡೆಪ್ಯುಟಿ ಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂಬ ನಿರ್ಮಲಾನಂದನಾಥ ಶ್ರೀಗಳ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ಎಂಬುದು ನಮ್ಮ ಪಕ್ಷದ ಆಂತರಿಕ ವಿಚಾರ. ಹೊರಗಿನವರು ಏನು ಹೇಳಿದರೂ ಬದಲಾವಣೆ ಆಗುವುದಿಲ್ಲ. ಹೈಕಮಾಂಡ್ ನಿರ್ಧಾರವೇ ಅಂತಿಮ. ಯಾವುದು ಪಕ್ಷಕ್ಕೆ ಒಳ್ಳೆಯದು ಎನ್ನುವುದನ್ನು ಪರಿಶೀಲಿಸಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.


