ಬಡ್ಡಿ ಸುಲಿಗೆಕೋರ ‘ಯಲ್ಲಪ್ಪ’ನ ಮನೆ ಲಾಕರ್ ನಲ್ಲಿತ್ತು ಕಂತೆ-ಕಂತೆ ನೋಟು: ದಂಗಾದ ಪೊಲೀಸರು, ಐವರು ಅರೆಸ್ಟ್!

0
Spread the love

ಗದಗ:- ಆತನ ಹೆಸರು ಯಲ್ಲಪ್ಪ ಮಿಸ್ಕಿನ್ ಅಂತ. ಆದರೆ ಜನ ಮಾತ್ರ ಇವನನ್ನು ಬಡ್ಡಿ ಮಿಸ್ಕಿನ್ ಯಲ್ಲಪ್ಪ ಅಂತ್ಲೇ ಕರಿತಾಯಿದ್ರು. ನಿನ್ನೆ ಪೊಲೀಸರು ದೂರೊಂದರ ಆಧಾರದ ಮೇಲೆ ಅವನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಕೋಟಿಗಟ್ಟಲೆ ಹಣ ಪತ್ತೆಯಾಗಿತ್ತು. ಇವತ್ತು ಅವನಿಗೆ ಸೇರಿದ ಕೇಸರ್ ಫೈನಾನ್ಸ್ ಬಳಿಯಿರುವ ಮನೆಯ ಮೇಲೆ ದಾಳಿ ನಡೆಸಿದಾಗಲೂ ಕಂತೆ ಕಂತೆ ನೋಟುಗಳು ಮತ್ತು ಕಿಲೋಗಟ್ಟಲೆ ಚಿನ್ನಾಭರಣ ಪತ್ತೆಯಾಗಿವೆ.

Advertisement

ಅಶೋಕ ಗಣಾಚಾರಿ ಎನ್ನುವವರು ಯಲ್ಲಪ್ಪನಿಂದ ಸಾಲ ಪಡೆದು ಅವನು ನೀಡುತ್ತಿದ್ದ ಕಿರುಕುಳ ತಾಳಲಾಗದೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದಾಗ ಕೋಟಿ-ಕೋಟಿ ಹಣ ಮತ್ತು ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.

ಹೌದು, ಸಾವಿರ ಅಲ್ಲ, ಲಕ್ಷ ಅಲ್ಲ, ಕೋಟಿ, ಕೋಟಿ ಲೆಕ್ಕದಲ್ಲಿ ಬಡ್ಡಿ ದಂದೆ ಮಾಡ್ತಾಯಿದ್ದ. ಬಡ ಜನ್ರ ಬಳಿ ಬಡ್ಡಿ ಪಡೆದು ಕುಬೇರನಾಗಿದ್ದ. ಆದ್ರೆ ಇದೀಗ ಈ ಬಡ್ಡಿ ಸುಲಿಗೆಕೋರನ ಖಜಾನೆಯನ್ನು ಪೊಲೀಸ್ರು ಜಾಲಾಡಿದ್ದಾರೆ.

ಪದ್ಮನಾಭನ ಖಜಾನೆಯಂತೆ ಹತ್ತಾರು ಲಾಕರ್ ಗಳಲ್ಲಿ ಕೋಟಿ ಕೋಟಿ ಮೊತ್ತದ ಹಣದ ಕಂತೆಗಳು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಯಾರಿಗೂ ಅನುಮಾನ ಬರದಂತೆ ಹಳೆಯ ಕಟ್ಟಡದಲ್ಲಿ ಕೋಟಿ ಕೋಟಿ ಹಣ ಇಟ್ಟಿದ್ದ ಯಲ್ಲಪ್ಪ ಮಿಸ್ಕಿನ್. ಆದ್ರೆ, ಖಾಕಿ ಪಡೆಯ ಇಂಚಿಂಚು ಶೋಧ ನಡೆಸಿದರು. ಇದೀಗ ಪೊಲೀಸರ ಕಾರ್ಯಾಚರಣೆಗೆ ಇಡೀ ಗದಗ ಜಿಲ್ಲೆಯ ಜನ್ರು ಭೇಷ ಅಂತಿದ್ದಾರೆ.

ಎಸ್‌‌‌‌.. ಮನೆಯಲ್ಲಿ ಕಂತೆ ಕಂತೆ ಹಣ.. ಎಲ್ಲೆಂದರಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಅಪಾರ ಪ್ರಮಾಣದ ಚಿನ್ನ.. ಖಾಲಿ ಬಾಂಡ್, ಖಾಲಿ ಚೆಕ್ ಪತ್ತೆಯಾಗಿವೆ.. ಟ್ರಂಕ್ ನಲ್ಲಿ ಹಣ ತೆಗೆದುಕೊಂಡು ಪೊಲೀಸ್ರು ಠಾಣೆಗೆ ಎಂಟ್ರಿಯಾದರು. ಕೋಟ್ಯಾಂತರ ರೂಪಾಯಿ ನೋಡಿ ಒಂದು ಕ್ಷಣ ಪೊಲೀಸರೇ ಬೆಚ್ಚಿ ಹೋಗಿದ್ರು.. ಈ ಎಲ್ಲಾ ದೃಶ್ಯಗಳು ಇವತ್ತು ಕಂಡು ಬಂದವು.

ಅಂದಹಾಗೇ ನಿನ್ನೆಯಿಂದ ಪೊಲೀಸರು ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದು, ನೋಡೋಕೆ ಕಲ್ಲಿನ ಹಳೆಯದಾದ ಮನೆ. ಇಂಥ ಮನೆಯಲ್ಲಿ ಯಾರೂ ಇರ್ತಾರೆ ಅಂತ ಅತ್ತ ಯಾರೂ ತಿರುಗಿ ಕೂಡ ನೋಡಲ್ಲ. ಆದ್ರೆ, ಇವತ್ತು ಪೊಲೀಸರು ಆ ಮನೆಗೆ ಬಾಗಿಲು ತೆಗೆದು ಒಳಗೆ ಹೋಗಿ ಫುಲ್ ದಂಗಾಗಿ ಹೋಗಿದ್ರು. ಹಳೆಯ ಕಟ್ಟಡದಲ್ಲಿ ಅನಂತಪದ್ಮನಾಭನ ಖಜಾನೆಯೇ ಪತ್ತೆಯಾಗಿದೆ. ಒಂದೊಂದು ಲಾಕರ್ ಗಳು ಓಪನ್ ಮಾಡಿದ್ರೆ 500ಮುಖಬೆಲೆಯ ಕೋಟಿ ಕೋಟಿ ಹಣದ ಕಂತೆಗಳು ಪತ್ತೆಯಾಗಿವೆ. ಇಷ್ಟೊಂದು ಹಣ ಪಾಳು ಮನೆಯಲ್ಲಿ ಇರೋದು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ರು. ಗದಗ ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಬಡ್ಡಿ ದಂಧೆಯ ದೊಡ್ಡ ಕುಳ ಈ ಯಲ್ಲಪ್ಪ ಮಿಸ್ಕಿನ್. ಕೋಟಿ ಕೋಟಿ ಹಣ ಸಾಲವನ್ನಾಗಿ ನೀಡ್ತಾಯಿದ್ದ ಸಾಲವನ್ನು ಮರಳಿ ನೀಡದಿದ್ರೆ, ಅವರ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಂಡು ಕಿರುಕುಳ ನೀಡ್ತಾಯಿದ್ದನಂತೆ. ರೌಡಿಗಳನ್ನು ಬಿಟ್ಟು ಧಮ್ಕಿ, ಬೆದರಿಕೆ ಹಾಕ್ತಾಯಿದ್ದನಂತೆ. ಹೀಗಾಗಿ ಈತನಿಂದ ಕಿರುಕುಳಕ್ಕೆ ಒಳಗಾದ ಬೆಟಗೇರಿಯ ನಿವಾಸಿಯಾದ ಅಶೋಕ ಗಣಾಚಾರಿ ದೂರು ನೀಡಿದ್ರು.

ತಕ್ಷಣ ಅಲರ್ಟ್ ಆದ ಗದಗ ಎಸ್ಪಿ ಬಿ ಎಸ್ ನೇಮಗೌಡ, ಯಲ್ಲಪ್ಪ ಮಿಸ್ಕಿನ್ ಮಿಸಕಾಡದಂತೆ ಪಕ್ಕಾ ಪ್ಲಾನ್ ಮಾಡಿ ಈ ಬಡ್ಡಿ ಸುಲಿಗೆಕೋರನನ್ನು ಬಲೆಗೆ ಹಾಕಿದರು.

ಪಕ್ಕಾ ಪ್ಲಾನ್ ಮಾಡಿ ದಾಳಿಗೆ ಇಳಿದ ಗದಗ ಎಸ್ಪಿ ಬಿ ಎಸ್ ನೇಮಗೌಡ, ಯಲ್ಲಪ್ಪ ಮಿಸ್ಕಿನ್‌ಗೆ ಸೇರಿದ 13 ಕಡೆ, ಏಕಕಾಲದಲ್ಲಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿದ್ದಾರೆ.. ದಾಳಿ ವೇಳೆಯಲ್ಲಿ ಕೋಟ್ಯಾಂತ ಹಣ ಪತ್ತೆಯಾಗಿತ್ತು. ಅಪಾರ ಪ್ರಮಾಣದ ಚಿನ್ನ, ಹಾಗೂ ಖಾಲಿ ಬಾಂಡ್, ಖಾಲಿ ಚೆಕ್ ಹಾಗೂ ಬಡ್ಡಿ ದಂಧೆಗೆ ಸಂಬಂಧಿಸಿದಂತೆ ಪುಸ್ತಕ ಸಿಕ್ಕಿದ್ದು, ಎರಡು ದಿನಗಳ ದಾಳಿಯಲ್ಲಿ ಬರೊಬ್ಬರಿ 4 ಕೋಟಿ 90ಲಕ್ಷ 98 ಸಾವಿರ ಹಣ ಪತ್ತೆಯಾಗಿದೆ.

ಇನ್ನೂ ಹೊಸ ಖಜಾನೆ ಓಪನ್ ಮಾಡಲು ಯಲ್ಲಪ್ಪ ಮಿಸ್ಕಿನ್ ಪೊಲೀಸ್ ಅಧಿಕಾರಿಗಳನ್ನು ಸಾಕಷ್ಟು ಸತಾಯಿಸಿದ್ದಾನೆ. ನನಗೆ ಬಿಪಿ ಲೋ ಆಗ್ತಾಯಿದೆ. ಅರೋಗ್ಯ ಸರಿಯಿಲ್ಲ ಎಂದು ಹೆದರಿಸಿದ್ದಾನೆ. ಆಗ ಪೊಲೀಸರು ತಕ್ಷಣ ಆಸ್ಪತ್ರೆಗೆ ಕರೆದ್ಯೊಯ್ದು ಆರೋಗ್ಯ ತಪಾಸಣೆ ಮಾಡಿದ್ದಾರೆ. ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದಿದ್ದೇ ತಡ. ತಕ್ಷಣ ಅಲರ್ಟ್ ಆಗಿ ಯಲ್ಲಪ್ಪ ಕಚೇರಿ ಪಕ್ಕದ ಹಳೆಕಲ್ಲಿನ ಮನೆಯ ಬಾಗಿಲು ಓಪನ ಮಾಡಿ ಎಂಟ್ರಿಯಾಗಿದ್ದಾರೆ.

ಲಾಕರ್ ಓಪನ್ ಮಾಡದಿದ್ರೆ ಒಡೆದು ತೆಗೆಯುವುದಾಗಿ ತಾಕೀತು ಮಾಡಿದ್ದಾರೆ. ಆಗ ಯಲ್ಲಪ್ಪ ತಕ್ಷಣ ಲಾಕರ್ ಓಪನ್ ಮಾಡಿದ್ದಾರೆ. ಒಳಗೆ ಹೋಗಿ ಲಾಕರ್ ಗಳು ಓಪನ್ ಮಾಡಿದ ಪೊಲೀಸ್ ಅಧಿಕಾರಿಗಳು, ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. 500 ಮುಖಬೆಲೆಯ ಕಂತೆ-ಕಂತೆ ಕೋಟ್ಯಾಂತರ ಹಣ ಇಂದು ಪತ್ತೆಯಾಗಿದೆ. ಹಣ ಎಣಿಸುವಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ.

ಆತನ ಬಳಿ ಅಂದಾಜು 5 ಕೋಟಿ ನಗದು, ಬಾಂಡ್ 650, ಬ್ಯಾಂಕ್ ಎಟಿಎಂ 4, ಬ್ಯಾಂಕ್ ಪಾಸ್ ಬುಕ್ 9, ಎಲ್ಐಸಿ ಬಾಂಡ್ 2 ಹಾಗೂ ಅಕ್ರಮವಾಗಿ ಸಂಗ್ರಹ ಮಾಡಿದ 62ಲೀಟರ್ ಮಧ್ಯ ಜಪ್ತಿ ಮಾಡಿದ್ದಾರೆ. ಯಲ್ಲಪ್ಪ ಮಿಸ್ಕಿನ್ ಸೇರಿ ಇದೀಗ 5 ಜನರನ್ನು ಬಂಧಿಸಲಾಗಿದೆ. ಗದಗ ಜಿಲ್ಲೆಯಲ್ಲೇ ಈ ದಾಳಿ ಇತಿಹಾಸ ನಿರ್ಮಿಸಿದೆ. ಇದರಿಂದಾಗಿ
ಗದಗ ಬೆಟಗೇರಿ ಅವಳಿ ನಗರದ ಬಡ್ಡಿ ದಂಧೆಕೋರರು ಬೆಚ್ಚಿಬಿದ್ದಿದ್ದಾರೆ.

ಪೊಲೀಸ್ ಈ ಕಾರ್ಯಕ್ಕೆ ಗದಗ ಬೆಟಗೇರಿ ಅವಳಿ ನಗರದ ಜನ್ರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ ಗದಗ ಜಿಲ್ಲೆಯ ಬಡ್ಡಿ ದಂಧೆಕೋರರಿಗೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಬಡ್ಡಿ ದಂಧೆಕೋರರು ಈಗ ಮುದುಡಿ ಮೂಲಿಗೆ ಸೇರುತ್ತಿದ್ದಾರೆ.

ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ . ನೇಮಗೌಡ, ಬೆಟಗೇರಿಯ ಅಶೋಕ ಗಣಾಚಾರಿ ಅವರು ನೀಡಿದ ದೂರು ಆಧರಿಸಿ ಈ ದಾಳಿ ನಡೆಸಲಾಗಿದೆ. ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್ ಎನ್ನುವ ಬಡ್ಡಿ ದಂಧೆ ನಡೆಸುವ ವ್ಯಕ್ತಿಗೆ ಸಂಬಂಧಿಸಿದ ಮನೆ, ಸಂಬಂಧಿಕರ ಮನೆ ಸಹಿತ ಒಟ್ಟು 13 ಕಡೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 4.90 ಕೋಟಿ ರೂ.ನಗದು, 992 ಗ್ರಾಂ ಬಂಗಾರ, 600 ಬ್ಯಾಂಕ್ ಚೆಕ್ಕುಗಳು, 650 ಬಾಂಡ್ , 9 ಬ್ಯಾಂಕ್ ಪಾಸ್ ಬುಕ್ , 4 ಎಟಿಎಂ ಕಾರ್ಡ್ , 2 ಎಲ್ ಐಸಿ ಬಾಂಡ್ , 65 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಯಲ್ಲಪ್ಪ ಮಿಸ್ಕಿನ್ , ವಿಕಾಸ ಮಿಸ್ಕಿನ್, ಮಂಜು ಶ್ಯಾವಿ, ಈರಣ್ಣ ಬೂದಿಹಾಳ, ಮೋಹನ ಎನ್ನುವ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಎಂ.ಬಿ. ಸಂಕದ ಮಾರ್ಗದರ್ಶನದಲ್ಲಿ, ಮಹಾಂತೇಶ ಸಜ್ಜನ ಹಾಗೂ ಜೆ.ಎಚ್ ಇನಮಾದಾರ ನೇತೃತ್ವದಲ್ಲಿ ಸಂಗಮೇಶ ಶಿವಯೋಗಿ, ಧೀರಜ್ ಶಿಂಧೆ, ಸಿದ್ರಾಮೇಶ್ವರ ಗಡಾದ, ಎಲ್.ಎಮ್. ಆರಿ, ಆರ್.ಸಿ. ದೊಡ್ಡಮನಿ, ನಾಗರಾಜ ಗಡದ, ಚನ್ನಯ್ಯ ಬೇವೂರ, ಎಲ್.ಕೆ. ಜೂಲಕಟ್ಟಿ, ಮಾರುತಿ, ಜೊಂಗದಂಡಕರ, ಸೋಮನಗೌಡ ಗೌಡರ, ಶಂಕುಂತಲಾ ನಾಯಕ, ಐಶ್ವರ್ಯ ನಾಗರಾಳ, ಗಿರೀಶ ಎಮ್. ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here