ವಿಜಯಸಾಕ್ಷಿ ಸುದ್ದಿ, ಗದಗ : ನಿತ್ಯ ಯೋಗಾಭ್ಯಾಸದಿಂದ ಮಾತ್ರ ಉತ್ತಮ ಆರೋಗ್ಯ ಸಾಧ್ಯ. ನಿರಂತರ 10 ವರ್ಷದಿಂದ ಜಗತ್ತಿಗೆ ಯೋಗವನ್ನು ಪರಿಚಯಿಸಿ ವಿಶ್ವ ಗುರುವಾದ ಭಾರತ ವಿಶ್ವಕ್ಕೆ ಆರೋಗ್ಯವನ್ನು ಕೊಟ್ಟಿದೆ. ಜೂನ್ 21ಕ್ಕೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು, ದೈನಂದಿನ ಬದುಕಿನಲ್ಲಿ ಯೋಗಕ್ಕೆ ಸ್ವಲ್ಪ ಸಮಯವನ್ನು ಕೊಟ್ಟು ಆರೋಗ್ಯವನ್ನು ಸದೃಢವಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಮ್.ಎಸ್. ಉಪ್ಪಿನ ಅಭಿಪ್ರಾಯಪಟ್ಟರು.
ನಗರದ ಶ್ರೀ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಜಿಲ್ಲಾ ಆಯುಷ್ ಇಲಾಖೆ, ಶ್ರೀರಾಮ ವಾಯುವಿಹಾರಿಗಳ ಸಂಘ ಮತ್ತು ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಯೋಗಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಗುರುಗಳಾದ ಕೆ.ಎಸ್. ಪಲ್ಲೇದ ಯೋಗಾಸಕ್ತ ಬಂಧುಗಳಿಗೆ ಹಾಗೂ ಬಡಾವಣೆಯ ಜನತೆಗೆ ವಿವಿಧ ಆಸನಗಳ ಪ್ರಾತ್ಯಕ್ಷಿಕೆಯನ್ನು ಮಾಡಿಸಿ ಮಾತನಾಡುತ್ತಾ, ಯೋಗದಿಂದ ಮನಸ್ಸು ಸದೃಢಗೊಳ್ಳುವುದು.
ಯೋಗ ಒಂದು ಸಾಧನೆ. ಈ ಸಾಧನೆಯನ್ನು ಯಾರು ಕರಗತ ಮಾಡಿಕೊಳ್ಳುತ್ತಾರೋ ಅವರು ಬದುಕಿನಲ್ಲಿ ಎಲ್ಲವನ್ನೂ ಜಯಿಸುವರು ಎಂದರು.
ಡಾ. ಕಲ್ಲೇಶ ಮೂರಶಿಳ್ಳಿನ ಕಾರ್ಯಕ್ರಮ ನಡೆಸಿಕೊಟ್ಟರು. ಗೌಡಪ್ಪ ಬೊಮ್ಮಪ್ಪನವರ ವಂದಿಸಿದರು.



