ವಿಜಯಸಾಕ್ಷಿ ಸುದ್ದಿ, ಗದಗ: ಯೋಗ ಪ್ರಾಚೀನ ಕಾಲದಿಂದಲೂ ಆಧ್ಯಾತ್ಮ ಸಾಧನೆಗೆ, ಮೋಕ್ಷ ಪ್ರಾಪ್ತಿಗೆ ಸಾಧು-ಸನ್ಯಾಸಿಗಳಿಗೆ ಮೀಸಲಾಗಿದ್ದು, ಇಂದು ಯೋಗವು ಒಂದು ಕ್ರೀಡೆ ಎಂದು ರೂಪುಗೊಂಡಿದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಕ್ರೀಡೆಗಳು ನಡೆಯುತ್ತಿವೆ. ಸಾಮಾನ್ಯವಾಗಿ ಕ್ರೀಡೆಗಳು ಆರೋಗ್ಯಕ್ಕೆ ಸಹಕಾರಿ ಎಂಬುದು ಬಹುಜನರ ಅಭಿಮತ. ಆದರೆ ಯೋಗ ಕ್ರೀಡೆ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಜೊತೆಗೆ ಅವರಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ನೈತಿಕ ಅರಿವನ್ನು ಮೂಡಿಸಿ ಅವರ ಭವಿಷ್ಯ ಜೀವನದ ಅಭಿವೃದ್ಧಿಗೆ ಸಹಕಾರಿಯಾಗಿದೆ ಈ ದಿಸೆಯಲ್ಲಿ ಯೋಗ ಕ್ರೀಡೆ ಮಕ್ಕಳ ಸರ್ವೋನ್ನತಿಗೆ ಸಹಕಾರಿಯಾಗಿದೆ ಎಂದು ಗದಗ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೋಮಶೇಖರ ಇ.ಆರ್ ತಿಳಿಸಿದರು.
ರಾಷ್ಟ್ರೀಯ ಯೋಗ ಒಲಂಪಿಯಾಡ್-೨೦೨೫ ಸ್ಪರ್ಧೆಗೆ ರಾಜ್ಯ ತಂಡವನ್ನು ಆಯ್ಕೆ ಮಾಡುವ ಪ್ರಯುಕ್ತ ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಗದಗ ಇವರು ಏರ್ಪಡಿಸಿದ್ದ ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಯೋಗ ಸರ್ವ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದಂತೆ ಇತ್ತೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಮಹತ್ವ ಪಡೆದಿದೆ. ಮುಂಬರುವ ಒಲಿಂಪಿಕ್ ಕ್ರೀಡೆಯಲ್ಲಿ ಯೋಗಾಸನ ಕ್ರೀಡೆ ಸೆರ್ಪಡೆಯಾಗಿರುವ ವಿಷಯ ನಮಗೆಲ್ಲ ಸಂತಸ ತಂದಿದೆ. ಯೋಗ ಕ್ರೀಡಾಪಟುಗಳು ಇನ್ನುಳಿದ ಕ್ರೀಡೆಗಳಲ್ಲಿ ಹೆಚ್ಚಿನ ಪರಿಣಿತಿ ಹೊಂದಲು ಸಾಧ್ಯವಾಗುವದು. ತಾವೆಲ್ಲ ಯೋಗ ಕ್ರೀಡೆ ಬೆಳೆಸಲು ಪ್ರೋತ್ಸಾಹಿಸಬೇಕೆಂದು ಕಾರ್ಯಕ್ರಮದಲ್ಲಿ ನೆರೆದ ಯೋಗಾಸನ ಕ್ರೀಡಾಪಟು ಹಾಗೂ ಪಾಲಕರಿಗೆ, ತರಬೇತುದಾರರಿಗೆ ಸೂಚಿಸಿದರು.
ವೇದಿಕೆಯಲ್ಲಿ ಗದಗ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಜಯಶ್ರೀ ಅಣ್ಣಿಗೇರಿ, ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲದ, ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಶಹನಾಜ ಬಚನಳ್ಳಿ ಉಪಸ್ಥಿತರಿದ್ದರು.
ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಚೇತನ ಚುಂಚಾ, ಯಶವಂತ ಮತ್ತೂರ, ಸುಧಾ ಪಾಟೀಲ, ಎಸ್.ಎಂ. ಬುರಡಿ ಗುರುಗಳು ಪಾಲ್ಗೊಂಡಿದ್ದರು. ಶಿರೋಳ, ಅಂತೂರ-ಬೆಂತೂರ, ಪಾಪನಾಶಿ, ಕದಾಂಪೂರ, ಮುಳಗುಂದ ಮತ್ತು ಸ್ಥಳೀಯ ಯೋಗ ಕ್ರೀಡಾಪಟುಗಳು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಶುಸೃತ ಗುಡಗೂರ ಪ್ರಾರ್ಥನೆ ಹೇಳಿದರು. ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎಂ. ಬುರಡಿ ಗುರುಗಳು ಸರ್ವರಿಗೂ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನರಗುಂದ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ ಮಾತನಾಡಿ, ಯೋಗ ಒಲಂಪಿಯಾಡ್ ಸ್ಫರ್ಧೆಯ ನೀತಿ-ನಿಯಮಗಳನ್ನು ತಿಳಿಸಿ ಯೋಗಾಸನ ಕ್ರೀಡೆ ಸರ್ವ ಕ್ರೀಡೆಗಳ ಜನಕವಾಗಿದೆ. ಆಸಕ್ತರು ಹೆಚ್ಚಿನ ತರಬೇತಿ ಪಡೆದು ಗೆಲುವು ಸಾಧಿಸಿ ಎಂದು ಶುಭ ಹಾರೈಸಿದರು.