ವಿಜಯಸಾಕ್ಷಿ ಸುದ್ದಿ, ಗದಗ: ಬದಲಾದ ಜೀವನ ಶೈಲಿ ಮತ್ತು ಆಹಾರ ಸೇವನೆಯ ಪರಿಣಾಮದಿಂದ ಮಾನವ ಇಂದು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಒಳಗಾಗಿದ್ದಾನೆ. ಇದರಿಂದ ಒತ್ತಡಯುಕ್ತ ಬದುಕು ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಯೋಗದ ಚಟುವಟಿಕೆಗಳು ಮನುಷ್ಯನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತವೆ. ಇದು ನಮ್ಮ ನಿತ್ಯ ಜೀವನದ ಭಾಗವಾಗಬೇಕೆಂದು ಆಯುರ್ವೇದ ವೈದ್ಯರು, ಸಾಹಿತಿಗಳಾದ ಡಾ. ಕಲ್ಲೇಶ ಮೂರಶಿಳ್ಳಿನ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯೋಗಬಂಧು ಸಂಗಮೇಶ ಮೇಲ್ಮುರಿ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸದಲ್ಲಿ ಯೋಗ ಮತ್ತು ಆರೋಗ್ಯ ಕುರಿತು ಮಾತನಾಡಿದರು.
ದೈಹಿಕ ಸಮಸ್ಯೆಗಳಿಗೆ ಮನಸ್ಸೇ ಮೂಲವಾಗಿರುವದರಿಂದ ಮನಸ್ಸಿನ ನಿಗ್ರಹ ಯೋಗದಿಂದ ಮಾತ್ರ ಸಾಧ್ಯ. ಆತ್ಮವಿಶ್ವಾಸ, ಆತ್ಮಪ್ರಜ್ಞೆ, ವಿಶ್ರಾಂತಿ ಮತ್ತು ಉತ್ತಮ ಮನಸ್ಥಿತಿಯನ್ನು ಹೊಂದಲು ಯೋಗ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಂಗಮೇಶ ಮೇಲ್ಮುರಿ ಅವರ ಸಂಸ್ಮರಣೆ ಮಾಡಿದ ಸಾಹಿತಿ ಅಂದಾನೆಪ್ಪ ವಿಭೂತಿ ಮಾತನಾಡಿ, ಎಲ್.ಐ.ಸಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ನಂತರ ಯೋಗ ಮತ್ತು ಆಯುರ್ವೇದ ಪ್ರಚಾರದಲ್ಲಿ ಮಾಡಿದ ಸಾಧನೆಯನ್ನು ತಿಳಿಸಿ, ದಾನಿಗಳಾಗಿ ಅನೇಕ ಸಮಾಜೋಪಯೋಗಿ ಕಾರ್ಯಗಳಲ್ಲಿ ಭಾಗಿಯಾಗಿರುವದನ್ನು ಸ್ಮರಿಸಿದರು.
ಕೊಟ್ರೇಶ ಮೇಲ್ಮುರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಧನೇಶ ದೇಸಾಯಿ, ಡಾ. ಆರ್.ಎನ್. ಗೋಡಬೋಲೆ, ಡಾ. ಅರ್ಜುನ ಗೊಳಸಂಗಿ, ಅನ್ನದಾನಿ ಹಿರೇಮಠ, ಬಿ.ಎಸ್. ಹಿಂಡಿ, ವಿ.ಎಸ್. ದಲಾಲಿ, ಎಸ್.ಯು. ಸಜ್ಜನಶೆಟ್ಟರ, ರಾಜಶೇಖರ ಕರಡಿ, ರಾಜೇಶ್ವರಿ ಬಡ್ನಿ, ಅಶೋಕ ಸತ್ಯರಡ್ಡಿ, ಶಕುಂತಲಾ ಗಿಡ್ನಂದಿ, ಅಶೋಕ ಮತ್ತಿಗಟ್ಟಿ, ಜಯನಗೌಡ ಪಾಟೀಲ, ಅಮರೇಶ ರಾಂಪೂರ, ಅಶೋಕ ಹಾದಿ, ಬಸವರಾಜ ಗಣಪ್ಪನವರ, ಎಸ್.ಸಿ. ಹಾಲಕೇರಿ, ಸುಧಾ ಬಳ್ಳಿ, ಮಲ್ಲಿಕಾರ್ಜುನ ನಿಂಗೋಜಿ, ರತ್ನಾ ಪುರಂತರ, ಶಶಿಕಾಂತ ಕೊರ್ಲಹಳ್ಳಿ, ಎಂ.ಎಫ್. ಡೋಣಿ, ಬಸವರಾಜ ನೆಲಜೇರಿ, ರಾಜಶೇಖರ ಪಾಟೀಲ, ಬೂದಪ್ಪ ಅಂಗಡಿ, ಕಿರಣ ಗುಗ್ಗರಿ, ರಮೇಶ ಹಂಚಿನಾಳ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಸುರೇಶ ನಲವಡಿ ಕೃಷ್ಣ ಕಡಿಯವರು ಮೊದಲಾದವರು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಒಂದು ಕಾಲದಲ್ಲಿ ಅನ್ನದ ಕೊರತೆಯಿತ್ತು. ಆದರೆ ಇಂದು ಆರೋಗ್ಯದ ಕೊರತೆಯಿದೆ. ಆರೋಗ್ಯದ ಅನಕ್ಷರತೆಯಿಂದ ದುಡಿಮೆಯ ಬಹುಪಾಲನ್ನು ಆರೋಗ್ಯ ರಕ್ಷಣೆಗಾಗಿ ಕಳೆಯುವ ಸಂದರ್ಭ ಒದಗಿ ಬಂದಿದೆ. ಹೀಗಾಗಿ, ಶಾಲಾ-ಕಾಲೇಜುಗಳಲ್ಲಿ ಆರೋಗ್ಯ ಶಿಕ್ಷಣ ನೀಡುವಂತಾಗಬೇಕೆಂದು ತಿಳಿಸಿದರು.


