ಬೆಂಗಳೂರು: ಮನಸ್ಸು, ಮೆದುಳು ಹಾಗೂ ದೇಹವನ್ನು ಒಗ್ಗೂಡಿಸುವ ಗಂಗೋತ್ರಿಯೆಂದರೆ ಅದು ಯೋಗ ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಜೂನ್‌ನಲ್ಲಿ ಆಚರಿಸಲಾಗುವ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಪೂರ್ವಭಾವಿಯಾಗಿ ಲೈಫ್ ಎಟರ್ನಲ್ ಟ್ರಸ್ಟ್ ನ ಆಯೋಜನೆಯಲ್ಲಿ, ಸಹಜ ಯೋಗ ಸಂಸ್ಥೆಯು ಸಾರ್ವಜನಿಕರಲ್ಲಿ ಯೋಗ ಕುರಿತು ಜಾಗೃತಿ ಮೂಡಿಸಲು ಹಾಗೂ ಧ್ಯಾನದ ಮಹತ್ವ ತಿಳಿಸಿ ಕೊಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಚರಿಸಲು ಸಿದ್ಧವಾಗಿರುವ ಮೊಬೈಲ್ ವಾಹನಕ್ಕೆ ಪದ್ಮನಾಭನಗರದಲ್ಲಿ ಡಾ. ಸಿ.ಎನ್. ಮಂಜುನಾಥ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಯೋಗ ಎನ್ನುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಕ್ರಿಯೆ. ಏಕೆಂದ್ರೆ ಔಷಧ ಅಲ್ಲದ ಔಷಧಿಯ ಗುಂಪಿನ ಪಟ್ಟಿಯಲ್ಲಿ ಯೋಗ ಮತ್ತು ಧ್ಯಾನ ಸೇರುತ್ತದೆ. ಈ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ಕಾಲಘಟ್ಟದಲ್ಲಿ ನಾವು ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಿದ್ದೇವೆ.
ಇಂತಹ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನ ಮಾಡುವ ಮೂಲಕ ನಮ್ಮ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು. ಮನಸ್ಸು, ಮೆದುಳು ಹಾಗೂ ದೇಹವನ್ನು ಒಗ್ಗೂಡಿಸುವ ಗಂಗೋತ್ರಿಯೆಂದರೆ ಅದು ಯೋಗ. ಲೈಫ್ ಎಟರ್ನಲ್ ಟ್ರಸ್ಟ್ನ ಆಯೋಜನೆಯಲ್ಲಿ ಮಾತಾಜಿ ನಿರ್ಮಲಾದೇವಿಯವರ ಸಹಜ ಯೋಗ ಸಂಸ್ಥೆಯ ಸದಸ್ಯರು ಇಂದು ಯೋಗದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊಬೈಲ್ ವ್ಯಾನ್ ಸೇವೆಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಡಾ. ಸಿ.ಎನ್. ಮಂಜುನಾಥ್ ಅವರು ಅಭಿಪ್ರಾಯಪಟ್ಟರು.