ಯೋಗ, ಆಧ್ಯಾತ್ಮ ವಿಶ್ವಶಾಂತಿಗೆ ಸಹಕಾರಿ: ಡಾ. ತೋಂಟದ ಸಿದ್ಧರಾಮ ಶ್ರೀಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವದಲ್ಲೀಗ ಭಿನ್ನ ಭೇದಗಳ ಕಾರಣದಿಂದ ಅಶಾಂತಿ ರಾರಾಜಿಸುತ್ತಿದೆ. ಎಲ್ಲರೂ ಒಂದಿಲ್ಲೊಂದು ಭಯದಿಂದಲೇ ಜೀವನ ನಡೆಸುತ್ತಿದ್ದಾರೆ. ವಿಶ್ವದ ಭಿನ್ನತೆ, ಅನೇಕತೆಗಳನ್ನು ಸಮರಸಗೊಳಿಸಬೇಕಾಗಿದೆ. ಈ ಕಾರ್ಯ ಯೋಗ ಮತ್ತು ಆಧ್ಯಾತ್ಮಗಳಿಂದ ಮಾತ್ರ ಸಾಧ್ಯ. ಯೋಗ ಸಾಧನೆಯಿಂದ ಮಾನವ ದೈಹಿಕ, ಮಾನಸಿಕವಾಗಿ ಆರೋಗ್ಯವಂತನಾಗಿರಲು ಸಾಧ್ಯ. ದೈಹಿಕ, ಮಾನಸಿಕ ಆರೋಗ್ಯದಿಂದ ಸದೃಢನಾದ ವ್ಯಕ್ತಿಯ ಮನಸ್ಸು, ಬುದ್ಧಿ, ಭಾವ, ಭಾವನೆಗಳು ಪರಿಶುದ್ಧವಾಗಿರುವವು ಎಂದು ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

Advertisement

ಅವರು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಮತ್ತು ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಸಹಯೋಗದಲ್ಲಿ ಶ್ರೀಮಠದ ಅನುಭವ ಮಂಟಪದಲ್ಲಿ ಶ್ರೀ ತೋಂಟದಾರ್ಯ ಜಾತ್ರೆಯ ಪ್ರಯುಕ್ತ ನಡೆಸುವ ಉಚಿತ ಯೋಗ ತರಬೇತಿ ಶಿಬಿರ ಪ್ರಾರಂಭೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜಾತ್ರಾ ಮಹೋತ್ಸವ ಸಮಿತಿಯವರು ಯೋಗ ತರಬೇತಿ ಶಿಬಿರ ಏರ್ಪಡಿಸಿರುವದು ಸ್ತುತ್ಯ ಮತ್ತು ಅನುಕರಣೀಯ ಕಾರ್ಯವಾಗಿದೆ. ಇಂದಿನ ಯುವ ಜನಾಂಗಕ್ಕೆ ಯೋಗ ಅಗತ್ಯವಾಗಿದೆ. ಮುಂಬರುವ ದಿನಗಳಲ್ಲಿ ಇಂಥ ಸಮಾಜಮುಖಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲೆಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ ಉಪಾಧ್ಯಕ್ಷ ಕರವೀರಯ್ಯ ಕೋರಿಮಠ, ಪ್ರೊ. ಡಿ.ಜೆ. ಜೋಗಣ್ಣವರ, ಶೈಲಾ ಕೊಡೆಕಲ್ಲ, ಕಾರ್ಯದರ್ಶಿ ಶಿವಪ್ಪ ಕೆ. ಕತ್ತಿ, ಸಹ-ಕಾರ್ಯದರ್ಶಿ ದಶರಥರಾಜ ಕೊಳ್ಳಿ, ಸಿದ್ಧರಾಮಪ್ಪ ಗೊಜನೂರ, ಸಂಘಟನಾ ಕಾರ್ಯದರ್ಶಿ ನಾಗಪ್ಪ ಸವಡಿ, ಕೋಶಾಧ್ಯಕ್ಷ ವೀರಣ್ಣ ಗೊಡಚಿ, ರಾಜಶೇಖರ ಲಕ್ಕುಂಡಿ ಉಪಸ್ಥಿತರಿದ್ದರು.

ಪತಂಜಲಿ ಯೋಗ ಸಮಿತಿ ಮಾತೆಯರಾದ ಶೈಲಾ ಕೋಡೇಕಲ್ ಮತ್ತು ಶೋಭಾ ಗುಗ್ಗರಿ ನೇತೃತ್ವದಲ್ಲಿ ಯೋಗಾಸನ ಪ್ರದರ್ಶನ ನಡೆಯಿತು. ಸಮಾರಂಭದಲ್ಲಿ ಶ್ರೀಮಠದ ಸದ್ಭಕ್ತ ಮಂಡಳಿ, ಗಣ್ಯಮಾನ್ಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಮಾಜಿ ಅಧ್ಯಕ್ಷೆ ಸುವರ್ಣ ಹೊಸಂಗಡಿ ಪ್ರಾರ್ಥನೆ ಹೇಳಿದರು. ಜಾತ್ರಾ ಮಹೋತ್ಸವದ ಕಾರ್ಯದರ್ಶಿ ಶಿವಪ್ಪ ಕತ್ತಿ ಸ್ವಾಗತ ಕೋರಿದರು. ಯೋಗ ತರಬೇತಿ ಶಿಬಿರದ ಮಾರ್ಗದರ್ಶಕ ಕೆ.ಎಸ್. ಪಲ್ಲದ ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷ ವೀರಣ್ಣ ಗೊಡಚಿ ವಂದಿಸಿದರು.

ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾಮಹೋತ್ಸವದ ಅಧ್ಯಕ್ಷ ಡಾ. ಧನೇಶ ದೇಸಾಯಿ ಮಾತನಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಅನೇಕ ಕಾಯಿಲೆಗಳು ಯೋಗದಿಂದ ಗುಣವಾಗುತ್ತವೆ. ಹೆಚ್ಚು ಖರ್ಚಿಲ್ಲದೇ ಎಲ್ಲ ವಯೋಮಾನದವರು, ಎಲ್ಲ ಕಾಲಕ್ಕೂ ಯೋಗ ಸಾಧನೆ ಮಾಡಲು ಸಾಧ್ಯವಾಗುವದು. ಈ ಯೋಗ ತರಬೇತಿ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಸಭಿಕರಲ್ಲಿ ಕೋರಿದರು.


Spread the love

LEAVE A REPLY

Please enter your comment!
Please enter your name here